ADVERTISEMENT

ಬೆಳಗಾವಿ ಎಸಿ ಕಚೇರಿ ಜಪ್ತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 14:51 IST
Last Updated 22 ಏಪ್ರಿಲ್ 2021, 14:51 IST

ಬೆಳಗಾವಿ: ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಸಂಪೂರ್ಣ ಪರಿಹಾರ ವಿತರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಉ‍ಪ ವಿಭಾಗಾಧಿಕಾರಿ ಕಚೇರಿ ಜಪ್ತಿ ಮಾಡುವಂತೆ ಹಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

‘ವಿಮಾನನಿಲ್ದಾಣದ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆಂದು 1942ರಲ್ಲಿ ಮುತಗಾ ಗ್ರಾಮ ವ್ಯಾಪ್ತಿಯ ರೈತರಿಂದ 35 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, 30 ರೈತರಿಗೆ ಈವರೆಗೂ ಸಂಪೂರ್ಣ ಪರಿಹಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳ ವ್ಯಾಜ್ಯ ನಡೆಯುತ್ತಿದೆ. ಬಡ್ಡಿ ಸೇರಿಸಿ ₹ 5 ಕೋಟಿ ಪರಿಹಾರ ನೀಡಬೇಕಾಗಿದೆ. ನಾವು, ಉಪ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳು ಸೇರಿದಂತೆ ಚರಾಸ್ತಿಗಳನ್ನು ಪ್ರಕರಣದಲ್ಲಿ ಜೋಡಿಸಿದ್ದೆವು (ಅಟ್ಯಾಚ್). ಅವುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ’ ಎಂದು ವಕೀಲ ಅಪ್ಪಾಸಾಹೇಬ ವಾಮನರಾವ ಸದರಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಚೇರಿಯನ್ನು ಜಪ್ತಿ ಮಾಡಿದ್ದೆವು. ಈ ನಡುವೆ, ಮೇ 25ರಂದು ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಕಚೇರಿಯಿಂದ ಲಿಖಿತ ಅರ್ಜಿಯನ್ನು ನ್ಯಾಯಾಯಲಕ್ಕೆ ಸಲ್ಲಿಸಲಾಗಿತ್ತು. ಹೀಗಾಗಿ, ಜಪ್ತಿ ಮಾಡಿದ್ದ ಸಾಮಗ್ರಿಗಳನ್ನು ಅಲ್ಲೇ ಉಳಿಸಲಾಗಿದೆ. ಮುಂದಿನ ವಿಚಾರಣೆಯವರೆಗೂ ಕಾಯುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಕರೆ ಮಾಡಿದರೂ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.