ADVERTISEMENT

ಲಾಕ್‌ಡೌನ್‌: ಬೆಳಗಾವಿ ಬಹುತೇಕ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:29 IST
Last Updated 10 ಮೇ 2021, 5:29 IST
   

ಬೆಳಗಾವಿ: ಕೊರೊನಾ ಹರಡುವಿಕೆ ನಿಯಂತ್ರಿಸುವುದಕ್ಕಾಗಿ ಸರ್ಕಾರದಿಂದ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯು ಬಹುತೇಕ ಸ್ತಬ್ಧವಾಗಿದೆ.

ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ತರಕಾರಿ, ದಿನಸಿ ಮೊದಲಾದ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕೊಡಲಾಗಿತ್ತು. ವಾಹನಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಡೆದು ವಿಚಾರಿಸುವುದು ಸಾಮಾನ್ಯವಾಗಿತ್ತು. ಸಕಾರಣವಿಲ್ಲದೆ ಬಂದಿದ್ದವರ ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ ಘಟನೆಗಳೂ ನಡೆದಿವೆ. ನಡೆದುಕೊಂಡು ಹೋಗುವವರಿಗೆ ಅವಕಾಶ ನೀಡಿದರು.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅನಗತ್ಯವಾಗಿ ಓಡಾಡುವವರಿಗೆ ನಿರ್ಬಂಧ ವಿಧಿಸಿದ್ದಾರೆ. ಡಿಸಿಪಿ ವಿಕ್ರಮ ಅಮಟೆ ರಾಣಿ ಚನ್ನಮ್ಮ ವೃತ್ತದಲ್ಲಿ ಪರಿಶೀಲನೆ ನಡೆಸಿದರು.

ADVERTISEMENT

ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಕಾಬಂದಿ ಮಾಡಲಾಗಿದೆ. ತುರ್ತು ಸೇವೆಗಾಗಿ ಬರುವವರು ಹೊರತುಪಡಿಸಿ ಇತರರಿಗೆ ಅವಕಾಶ ಕೊಡುತ್ತಿಲ್ಲ. ಇದರಿಂದಾಗಿ ಬಹುತೇಕ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿವೆ. ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ಇಲ್ಲದಿರುವುದರಿಂದ ನಿಲ್ದಾಣಗಳು ಕೂಡ ಬಿಕೋ ಎನ್ನುತ್ತಿವೆ. ಔಷಧ ಅಂಗಡಿಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ಜನೌಷಧಿ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಗೋಕಾಕದ ಫಾಲ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ವಾಯುವಿಹಾರಕ್ಕೆಂದು ಬಂದು ನಿಲುಗಡೆ ಮಾಡಿದ್ದ 10 ದ್ವಿಚಕ್ರವಾಹಗಳನ್ನು ಪೊಲೀಸರು ಜಪ್ತಿ ಮಾಡಿದರು. ಅವುಗಳನ್ನು ಟ್ರ್ಯಾಕ್ಟರ್‌ನಲ್ಲಿ ಪೊಲೀಸ್ ಠಾಣೆಗೆ ಸಾಗಿಸಲಾಯಿತು. ಗ್ರಾಮೀಣ ಠಾಣೆ ಎಸ್.ಐ. ಎಂ.ಆರ್. ಖಿಲಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಗೋಕಾಕದಲ್ಲಿ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ಹಾಗೂ ಪೊಲೀಸ್ ಶಹರ ಠಾಣೆ ಎಸ್‌ಐ ಕೆ.ಬಿ. ವಾಲೀಕಾರ ಮತ್ತು ಸಿಬ್ಬಂದಿ ಮಾರ್ಕೆಟ್ ಪ್ರದೇಶದಲ್ಲಿ ದಾಳಿ ನಡೆಸಿದರು. ಲಾಕ್‌ಡೌನ್‌ ಮಾರ್ಗಸೂಚಿಯಲ್ಲಿ ಅವಕಾಶ ಇಲ್ಲದಿದ್ದರೂ ತೆರೆದಿದ್ದ 30 ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದರು.

ಅಂತರ ಜಿಲ್ಲಾ ಹಾಗೂ ರಾಜ್ಯ ಗಡಿಗಳನ್ನು ಬಂದ್ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ಅಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.