ADVERTISEMENT

ಹಾಲಭಾವಿ: 80 ಹಾಸಿಗೆಗಳ ವ್ಯವವ್ಥೆ

ಜಿಲ್ಲಾಧಿಕಾರಿ ಹಿರೇಮಠ ಅವರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:11 IST
Last Updated 16 ಜುಲೈ 2020, 17:11 IST
ಬೆಳಗಾವಿಯ ವಂಟಮುರಿ ಸಮೀಪದ ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿದ್ಧಗೊಳಿಸಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರಿಗೆ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮಾಹಿತಿ ನೀಡಿದರು
ಬೆಳಗಾವಿಯ ವಂಟಮುರಿ ಸಮೀಪದ ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿದ್ಧಗೊಳಿಸಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರಿಗೆ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮಾಹಿತಿ ನೀಡಿದರು   

ಬೆಳಗಾವಿ: ‘ಕೋವಿಡ್-19 ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಇಲ್ಲಿನ ವಂಟಮುರಿ ಸಮೀಪದ ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 80 ಹಾಸಿಗೆಗಳ ಸುಸಜ್ಜಿತ ಕೇಂದ್ರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಶಾಲೆಗೆ ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಅವರು ಪರಿಶೀಲಿಸಿದರು.

‘ರೋಗ ಲಕ್ಷಣಗಳಿಲ್ಲದ (ಅಸಿಂಪ್ಟಮೆಟಿಕ್) ವ್ಯಕ್ತಿಗಳನ್ನು ಮಾತ್ರ ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ. ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರನ್ನು ಬಿಮ್ಸ್ ಆಸ್ಪತ್ರೆಯಲ್ಲಿಯೇ ಇರಿಸಲಾಗುವುದು. ಬಿಮ್ಸ್‌ನಲ್ಲಿರುವ ಅಸಿಂಪ್ಟಮೆಟಿಕ್ ವ್ಯಕ್ತಿಗಳ ಪೈಕಿ ಕೆಲವರನ್ನು ಮಾತ್ರ ಈ ವಸತಿ ಶಾಲೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಹೊಸದಾಗಿ ದಾಖಲಾಗುವವರಿಗೆ ಅವರ ಅಗತ್ಯತೆ ಆಧರಿಸಿ ಕ್ರಮ ವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಇಲ್ಲಿ ಇರಿಸಲಾಗುವವರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟ, ವಸತಿ ಹಾಗೂ ಹಾಸಿಗೆಗಳು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಲಾಗಿದೆ. ಪ್ರತ್ಯೇಕ ವೈದ್ಯಕೀಯ ಹಾಗೂ ನರ್ಸಿಂಗ್ ತಂಡಗಳು ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸಲಿವೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಟಿವಿ ಇರಲಿದೆ. ಬಿಸಿ ನೀರು ಒದಗಿಸಲು ಸೋಲಾರ್ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.