ADVERTISEMENT

ತೆಲಸಂಗ: ಹೊಸ ಕಟ್ಟಡಗಳ ಗೋಡೆಗಳಲ್ಲಿ ಬಿರುಕು!

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:49 IST
Last Updated 30 ಜುಲೈ 2021, 12:49 IST
ತೆಲಸಂಗ ಗ್ರಾಮದ ಎಂ.ವೈ.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕೊಠಡಿಯ ಚಾವಣಿಯಲ್ಲಿ ನೀರು ಸಂಗ್ರಹವಾಗಿದೆ
ತೆಲಸಂಗ ಗ್ರಾಮದ ಎಂ.ವೈ.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕೊಠಡಿಯ ಚಾವಣಿಯಲ್ಲಿ ನೀರು ಸಂಗ್ರಹವಾಗಿದೆ   

ತೆಲಸಂಗ (ಬೆಳಗಾವಿ ಜಿಲ್ಲೆ): ಗ್ರಾಮದ ಎಂ.ವೈ.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಕೊಡಠಿಗಳು ಉದ್ಘಾಟನೆಗೊಂಡು ವಾರ ಕಳೆದಿಲ್ಲ. ಅದಾಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ₹ 1.26 ಕೋಟಿ ವೆಚ್ಚದ ಈ ಕಾಮಗಾರಿಯನ್ನು ನಿರ್ಮಿತ ಕೇಂದ್ರದವರಿಗೆ ನೀಡಿತ್ತು. ಸದ್ಯಕ್ಕೆ 3 ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಚಾವಣಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದ ಅಲ್ಲಲ್ಲಿ ನಿಲ್ಲುತ್ತಿದೆ. ನೀರು ನಿಲ್ಲುವುದರಿಂದ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮೇಲೆ ಥಳಕು ಒಳಗೆ ಹುಳುಕು ಅನ್ನುವಂತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

‘ಈಗಾಗಲೆ ಬಿರುಕು ಕಾಣಿಸಿಕೊಂಡಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಗುಣಮಟ್ಟದ ಇಟ್ಟಿಗೆ, ಸಿಮೆಂಟ್, ಮರಳು ಉಪಯೋಗಿಸಿದ್ದರೆ ಹೀಗಾಗುತ್ತಿರಲಿಲ್ಲ. ಪರೀಕ್ಷೆ ನಡೆಸಿ ಗುಣಮಟ್ಟ ಕುರಿತ ವರದಿಯನ್ನು ಗ್ರಾಮ ಸಭೆಯಲ್ಲಿಡಬೇಕು. ಗೋಡೆ ಬಿರುಕು ಬಿಟ್ಟಿರುವುದಕ್ಕೆ ಕಾರಣವಾರ ನಿರ್ಮಿತ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಹಿ ಸಂಗ್ರಹ ಮಾಡಿ ದೂರು ನೀಡುವುದು ಮಾತ್ರವಲ್ಲದೆ, ಕ್ರಮಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಡಾ.ಉದಯಕುಮಾರ ದೊಡ್ಡಮನಿ, ‘ನಿರ್ಮಿತಿ ಕೇಂದ್ರದವರು ನಿರ್ಮಿಸಿದ ಕೊಠಡಿಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ಹಾಗೂ ಚಾವಣಿಯಲ್ಲಿ ನೀರು ನಿಲ್ಲುತ್ತಿರುವುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.