ADVERTISEMENT

ಕಬ್ಬೂರ | ಡೊಣ್ಣೆಹುಳ ಬಾಧೆ; ರೈತರಲ್ಲಿ ಆತಂಕ

100 ಎಕರೆಗೂ ಅಧಿಕ ಪ್ರದೇಶದ ಬೆಳೆ ನಾಶ: ಅಪಾರ ಸಂಖ್ಯೆಯಲ್ಲಿ ಪತ್ತೆಯಾದ ಹುಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:41 IST
Last Updated 6 ಜುಲೈ 2025, 2:41 IST
ಕಬ್ಬೂರಿನಲ್ಲಿ ಕಬ್ಬು ಬೆಳೆಗೆ ಅಂಟಿಕೊಂಡ ಡೊಣ್ಣೆಹುಳುಗಳು
ಕಬ್ಬೂರಿನಲ್ಲಿ ಕಬ್ಬು ಬೆಳೆಗೆ ಅಂಟಿಕೊಂಡ ಡೊಣ್ಣೆಹುಳುಗಳು   

ಕಬ್ಬೂರ: ಚಿಕ್ಕೋಡಿ ತಾಲ್ಲೂಕಿನ ಕಬ್ಬೂರು ಹಾಗೂ ಸುತ್ತಲಿನ ಹೊಲಗಳಲ್ಲಿ ಡೊಣ್ಣೆಹುಳುಗಳ (ಗೊಣ್ಣೆಹುಳು) ಬಾಧೆ ತೀವ್ರವಾಗಿದೆ. ಈ ಊರಿನ ಸುಮಾರು 100 ಎಕರೆಗೂ ಹೆಚ್ಚು ‍ಪ್ರದೇಶದ ಬೆಳೆಯು ಹುಳುಬಾಧೆಗೆ ತುತ್ತಾಗಿದೆ.

ರೈತರು ಬೆಳೆದ ಕಬ್ಬು, ಗೋವಿನಜೋಳ, ಎಲೆಕೋಸು, ಗಜ್ಜರಿ ಮುಂತಾದ ಬೆಳೆಗಳಿಗೆ ಡೊಣ್ಣೆಹುಳುಗಳು ಅಂಟಿಕೊಂಡಿವೆ. ಮಣ್ಣಿನಲ್ಲಿ ಹುಟ್ಟುವ ಈ ಹುಳುಗಳು ಸಸಿಗಳ ಬೇರುಗಳನ್ನೇ ಕಡಿದು ತಿಂದು ಹಾಳು ಮಾಡುತ್ತಿವೆ. ಪ್ರತಿಯೊಂದು ಸಸಿಗೂ 6ರಿಂದ 10 ಡೊಣ್ಣೆಹುಳಗಳು ಅಂಡಿಕೊಂಡಿದ್ದು ಕಂಡುಬಂದಿದೆ.

ಪಟ್ಟಣದ ಚಿಮ್ಮಟದಾರ ತೋಟ, ಪಾಟೀಲ ತೋಟ, ಖೋತ ಅವರ ತೋಟ, ಕಾಮಗೌಡ ತೋಟ, ಮೀರಾಪೂರಹಟ್ಟಿ, ಗಣೇಶ ನಗರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಳುಗಳ ನಿಯಂತ್ರಣಕ್ಕೆ ಬಾರದಷ್ಟು ಹೆಚ್ಚಾಗಿದ್ದರಿಂದ ಕೈ ಚೆಲ್ಲಿ ಕುಳಿತಿದ್ದಾರೆ. ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಒಂದು ಎಕರೆ ಕಬ್ಬು ನಾಟಿ ಮಾಡಲು ಬೀಜಕ್ಕೆ ₹17 ಸಾವಿರ, ಭೂಮಿ ಹದ ಮಾಡಲು ₹5 ಸಾವಿರ, ಗೊಬ್ಬರಕ್ಕೆ ₹20 ಸಾವಿರ ಸೇರಿದಂತೆ ಒಟ್ಟು ₹50 ಸಾವಿರಕ್ಕೂ ಹೆಚ್ಚು ಹಣ ಸುರಿದಿದ್ದಾರೆ. ಆದರೆ, ಈಗ ಎಲ್ಲವೂ ಹುಳುಗಳ ಪಾಲಾಗಿದೆ.

ತಾಲ್ಲೂಕಿನಲ್ಲಿ 95,641 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 78,840 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. 40,675 ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗಿದ್ದು, ಇನ್ನೂ ನಾಟಿ ಕಾರ್ಯ ಮುಂದುವರಿದಿದೆ.

ಸದ್ಯ ಕಬ್ಬೂರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕಂಡುಬಂದ ಹುಳುಬಾಧೆ, ತಾಲ್ಲೂಕಿನಾದ್ಯಂತ ಹರಡುವ ಆತಂಕ ಎದುರಾಗಿದೆ. ಭೂತಪ್ಪ ಮಹಾದೇವ ಖೋತ ಅವರ ಕಬ್ಬು ಸಂಪೂರ್ಣ ನಾಶವಾಗಿದೆ.

‘ಈ ಹುಳುಗಳ ಬೇಸಿಗೆಯಲ್ಲಿ ಮೊಟ್ಟೆ ಇಡುತ್ತವೆ. ಮಳೆಗಾಲದಲ್ಲಿ ತೇವಾಂಶ ಕಡಿಮೆಯಾದ ಜಾಗದಲ್ಲಿ ಬೆಳೆಯುತ್ತವೆ. ಕಬ್ಬು ಮಾತ್ರವಲ್ಲ; ಉಳಿದೆಲ್ಲ ಬೆಳಗಳಿಗೂ ಈ ಹುಳಗಳ ಕಾಟ ಇದ್ದೇ ಇದೆ’ ಎನ್ನುವುದು ಕೃಷಿ ಅಧಿಕಾರಿಗಳ ಮಾತು.
 –ಶೀತಲ್ ಜಕಾತಿ
4 ಎಕರೆಯಲ್ಲಿ ಕಬ್ಬು ಗೋವಿನಜೋಳ ಹಾಕಿದ್ದೆ. ಹುಳುಗಳ ಕಾಟದಿಂದ ₹8 ಲಕ್ಷ ನಷ್ಟವಾಗಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ
ಸುಧಾಕರ ಪಾಟೀಲ ರೈತ ಕಬ್ಬೂರ
₹50 ಸಾವಿರದ ಎಲೆಕೋಸು ಗಜ್ಜರಿ ನಾಟಿ ಮಾಡಿದ್ದೆ. ಎಲ್ಲವೂ ಡೊಣ್ಣೆಹುಳು ಪಾಲಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ಬಾಳೇಶ ಕಾಮಗೌಡ ರೈತ ಕಬ್ಬೂರ
ಸುಮಾರು 100 ಎಕರೆಯಲ್ಲಿ ಡೊಣ್ಣೆಹುಳು ಬಾಧೆ ಕಾಣಿಸಿದೆ. ಗ್ರಾಮಸೇವಕ ಹುದ್ದೆ ಖಾಲಿ ಇರುವ ಕಾರಣ ನಾವೇ ಸ್ಪಂದಿಸಿ ರೈತರಿಗೆ ಸಲಹೆ ನೀಡಿದ್ದೇವೆ
ರಮೇಶ ಚಡಚಾಳ ಕೃಷಿ ಅಧಿಕಾರಿ ನಾಗರಮುನ್ನೊಳ್ಳಿ
ನಿಯಂತ್ರಣ ಕ್ರಮಗಳೇನು?
ಜೈವಿಕ ಕೀಟನಾಶಕವಾದ ಮೆಟಾರೈಝಿಯೆಂ ಅನಿಸೋಪಿಲೆ ಶೀಲೀಂಧ್ರವನ್ನು ಪ್ರತಿ ಎಕರೆಗೆ 5-10 ಕಿ.ಗ್ರಾಂ (ಬಾಧೆಗೆ ಅನುಸಾರವಾಗಿ) 250- 500 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಕಬ್ಬಿನ ಬೆಳೆಯ ಸಾಲಿನಲ್ಲಿ ಹಾಕಬೇಕು. ರಾಸಾಯನಿಕವಾಗಿ ಪ್ರತಿ ಎಕರೆಗೆ 100-200 ಗ್ರಾಂ ಇಮೀಡಾಕ್ಲೋಫ್ರಿಡ್ (ಶೇ.40), ಫೀಪ್ರೋನಿಲ್ (ಶೇ.40) ಡಬ್ಲುಜಿ ನೀರಿನಲ್ಲಿ ಬೆರೆಸಿ ಮಣ್ಣಿನಲ್ಲಿ ಇಂಗಿಸುವುದರ (ಡ್ರೆಂಚಿಂಗ್) ಅಥವಾ ಫೀಪ್ರೋನಿಲ್ ಹರಳುಗಳನ್ನು ಪ್ರತಿ ಎಕರೆಗೆ 7.5 ಕೆ.ಜಿ ಪ್ರಮಾಣವನ್ನು ಕಬ್ಬಿನ ಸಾಲಿನಲ್ಲಿ ಹಾಕಿ ನೀರು ಹಾಯಿಸುವದರ ಮೂಲಕ ಕಬ್ಬು ಬೆಳೆಯನ್ನು ಸಂರಕ್ಷಿಸಬಹುದು ಎಂದು ಕೃಷಿ ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವ್ಹಾಣ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.