ADVERTISEMENT

ಬೆಳಗಾವಿ: ಸಿಎಸ್‌ಆರ್‌ ಸಲಹಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 14:15 IST
Last Updated 15 ಜುಲೈ 2019, 14:15 IST
ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ರಾಜಾ ಲಖಮಗೌಡ ಕಾನೂನು ಕಾಲೇಜು ಸಹಯೋಗದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಸಲಹಾ ಕೇಂದ್ರವನ್ನು ಗಣ್ಯರು ಶನಿವಾರ ಉದ್ಘಾಟಿಸಿದರು
ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ರಾಜಾ ಲಖಮಗೌಡ ಕಾನೂನು ಕಾಲೇಜು ಸಹಯೋಗದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಸಲಹಾ ಕೇಂದ್ರವನ್ನು ಗಣ್ಯರು ಶನಿವಾರ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ರಾಜಾ ಲಖಮಗೌಡ ಕಾನೂನು ಕಾಲೇಜು ಸಹಯೋಗದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಸಲಹಾ ಕೇಂದ್ರವನ್ನು ಹಿಂದವಾಡಿಯ ಐಎಂಇಆರ್‌ನಲ್ಲಿ ಶನಿವಾರ ಉದ್ಘಾಟಿಸಲಾಯಿತು.

ಎಕ್ಸ್‌ಪರ್ಟ್‌ ಎಂಜಿನಿಯರಿಂಗ್ ಎಂಟರ್‌ಪ್ರೈಸಸ್‌ ಸಿಇಒ ವಿನಾಯಕ ಲೊಕೂರ ಮಾತನಾಡಿ, ‘ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಕಾನೂನು 2013ರ ವ್ಯಾಪ್ತಿಯಲ್ಲಿ ಬರುವ ಕಂಪನಿಗಳಿಗೆ ಕಾನೂನು ಪಾಲನೆ ಕಡ್ಡಾಯವಾಗಿದೆ. ಕಂಪನಿಗಳು ತಮ್ಮ ಲಾಭದ ಶೇ. 2ರಷ್ಟನ್ನು ಸಾಮಾಜಿಕ ಕಾರ್ಯಕ್ಕೆ ತೆಗೆದಿರಿಸಬೇಕಾಗುತ್ತದೆ. ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಕಂಪನಿಗಳಿಗೆ ಕಡ್ಡಾಯವಾಗಿದ್ದರೂ ನಿಸ್ವಾರ್ಥ, ದೂರದೃಷ್ಟಿಯಿಂದ ಈ ಕರ್ತವ್ಯವನ್ನು ಕಂಪನಿಗಳು ನಿಭಾಯಿಸಬೇಕು’ ಎಂದರು.

‘ಸಲಹಾ ಕೇಂದ್ರದ ಸ್ಥಾಪನೆಯು ವಿವಿಧ ಕಂಪನಿಗಳು ಹಾಗೂ ಎನ್‌ಜಿಒಗಳು ಒಗ್ಗೂಡಿ ಸಾಮಾಜಿಕ ಕಾರ್ಯ ನಿರ್ವಹಿಸಲು ಉತ್ತಮ ವೇದಿಕೆಯಾಗಲಿ’ ಎಂದು ಆಶಿಸಿದರು.

ADVERTISEMENT

ಐಎಂಇಆರ್ ಅಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಮಾತನಾಡಿ, ‘ಸಿಎಸ್‌ಆರ್‌ನಲ್ಲಿ ಕೈಗೊಳ್ಳುವ ಯೋಜನೆಗಳು ದೂರದೃಷ್ಟಿ ಹೊಂದಿರಬೇಕು’ ಎಂದು ಸಲಹೆ ನೀಡಿದರು.

ಕೇಂದ್ರದಲ್ಲಿ ಎಸ್.ಅರ್. ದೇಶಪಾಂಡೆ (ಸಿ.ಎಸ್.) ಅರ್.ಒ.ಸಿ. ಅನುಸರಣೆ, ಆಶೋಕ ಪರಾಂಜಪೆ (ಸಿ.ಎ) ಲೆಕ್ಕಪತ್ರಗಳು, ಡಾ.ಸಮೀನಾ ನಹೀದ್ ಬೇಗ್ (ಕಾನೂನು) ಹಾಗೂ ಡಾ.ಅತುಲ್ ದೇಶಪಾಂಡೆ, ಡಾ.ಕೀರ್ತಿ ಶಿವಕುಮಾರ್, ಶೈಲಜಾ ಹಿರೇಮಠ, ರಾಹುಲ್ (ಸಿಎಸ್‌ಆರ್, ಮಾನವ ಸಂಪನ್ಮೂಲ, ಹಣಕಾಸು, ವಿಶ್ಲೇಷಣೆ ಹಾಗೂ ಎನ್‌ಜಿಒ ಸಂಬಂಧಗಳು) ಅವರು ಕಂಪನಿಗಳಿಗೆ ಸಲಹೆ ನೀಡಲಿದ್ದಾರೆ.

ರಾಜಾ ಲಖಮಗೌಡ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಎಚ್‌.ವಿ. ಸಂಧ್ಯಾ, ಏಕಸ್, ಅಶೋಕ ಐರನ್ ಗ್ರೂಪ್, ಓರಿಯಾನ್ ಹೈಡ್ರಾಲಿಕ್ಸ್ ಮೊದಲಾದ ಕಂಪನಿಗಳ ಪ್ರತಿನಿಧಿಗಳು, ಎನ್‌ಜಿಒಗಳಾದ ಮಹೇಶ ಪ್ರತಿಷ್ಠಾನ, ಆಶ್ರಯ ಪ್ರತಿಷ್ಠಾನ, ರಾಜಲಕ್ಷ್ಮಿ ಪ್ರತಿಷ್ಠಾನ, ಜಯ ಭಾರತ ಪ್ರತಿಷ್ಠಾನ, ಬಾರ್ಕ್ ಪ್ರತಿನಿಧಿಗಳು ಇದ್ದರು.

ಐಎಂಇಆರ್ ನಿರ್ದೇಶಕ ಡಾ.ಅತುಲ್ ದೇಶಪಾಂಡೆ ಸ್ವಾಗತಿಸಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9449007550 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.