
ಬೆಳಗಾವಿಯಲ್ಲಿ ಕುಳಿತು ಅಮೆರಿಕದ ನಾಗರಿಕರನ್ನು ವಂಚನೆ ಮಾಡಿದ 28 ಆರೋಪಿಗಳನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ನಗರದಲ್ಲಿ ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕದ ನಾಗರಿಕರನ್ನು ‘ಡಿಜಿಟಲ್ ಅರೆಸ್ಟ್’ ಮೂಲಕ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಎಲ್ಲರನ್ನೂ 14 ದಿನಗಳಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಮೊದಲ ಹಂತದಲ್ಲಿ 28 ಪುರುಷ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕರೆತಂದು, ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ನಿಲ್ಲಿಸಲಾಯಿತು. ಕೆಲವರು ತಮ್ಮ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಕೋರಿದರು. ಇದು ಸಂಘಟಿತ ಕೃತ್ಯವಾದ್ದರಿಂದ ನ್ಯಾಯಾಧೀಶರು ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಗುರುವಾರ ಬಂಧಿಸಲಾದ 33 ಆರೋಪಿಗಳಲ್ಲಿ 28 ಮಂದಿಯನ್ನು ಮಾತ್ರ ಜೈಲಿಗೆ ಅಟ್ಟಲಾಗಿದೆ. ಉಳಿದ ಐವರು ಮಹಿಳೆಯರಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿಸಿದ ನಂತರ ಕೋರ್ಟ್‌ಗೆ ಹಾಜರು ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲ ಆರೋಪಿಗಳನ್ನು ಒಂದು ಪೊಲೀಸ್ ವ್ಯಾನ್‌ನಲ್ಲಿ ಕರೆತಂದಾಗ ಇಡೀ ವಾಹನ ಭರ್ತಿಯಾಗಿತ್ತು. ಆವರಣಕ್ಕೆ ತರುತ್ತಿದ್ದಂತೆಯೇ ಎಲ್ಲರೂ ಮುಖಗಳನ್ನು ಮುಚ್ಚಿಕೊಂಡು, ಮಾಧ್ಯಮದವರ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.
ಏನಿವರ ಅಪರಾಧ?: ಬೆಳಗಾವಿಯಲ್ಲೇ ಕುಳಿತು ಅಮೆರಿಕದ ನಾಗರಿಕರನ್ನು ‘ಡಿಜಿಟಲ್ ಅರೆಸ್ಟ್’ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪ್ರಕರಣವನ್ನು ನಗರದ ಪೊಲೀಸರು ಗುರುವಾರ ಭೇದಿಸಿದ್ದರು. ವಿವಿಧ ರಾಜ್ಯಗಳ 33 ಆರೋಪಿಗಳನ್ನು ಬಂಧಿಸಿದ್ದು, 37 ಹೈಟೆಕ್ ಲ್ಯಾಪ್‌ಟಾಪ್, 37 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು.
ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ನಾಗಾಲ್ಯಾಂಡ್ ರಾಜ್ಯಗಳಿಗೆ ಸೇರಿದ 32 ಮಂದಿ ಹಾಗೂ ನೇಪಾಳ ದೇಶದ ಒಬ್ಬ ಪ್ರಜೆಯನ್ನೂ ಬಂಧಿಸಲಾಗಿದೆ. ಡಿಜಿಟಲ್ ಹ್ಯಾಕ್‌ನಲ್ಲಿ ನಿಪುಣರಾದ ಎಲ್ಲರೂ ಒಂದೆಡೆ ಸೇರಿ ಬೆಳಗಾವಿ ಕೇಂದ್ರಿತವಾಗಿ ಈ ದೊಡ್ಡ ಹಗರಣ ನಡೆಸುತ್ತಿದ್ದರು.
‘ನಕಲಿ ಕಾಲ್ ಸೆಂಟರ್ ತೆರೆದು ಒಬ್ಬೊಬ್ಬ ಉದ್ಯೋಗಿ ದಿನಕ್ಕೆ ಕನಿಷ್ಠ 100 ಮೊಬೈಲ್ ಕರೆ ಮಾಡುತ್ತಿದ್ದ. ಇವರ ನೆರವಿಗೆ ಅಮೆರಿಕದಲ್ಲೂ ಒಂದು ತಂಡ ಕೆಲಸ ಮಾಡಿದ ಸಾಧ್ಯತೆ ಇದೆ. ಆ ತಂಡದ ಮೂಲಕವೇ ಮೊಬೈಲ್ ನಂಬರ್, ಮನೆ ವಿಳಾಸ, ಬ್ಯಾಂಕ್ ವಿವರ ಪಡೆದುಕೊಳ್ಳಲಾಗಿದೆ.
ಅನಧಿಕೃತವಾಗಿ ಗುರುತು ಪತ್ತೆ ಅಪರಾಧ ಮತ್ತು ಚೀಟಿಂಗ್ ಬೈ ಪರ್ಸೂಲೇಷನ್ 66(ಎ), 66(ಬಿ), 75, 77, 48 ಮತ್ತು 49, 42ನೇ ಸೆಕ್ಷನ್ ಅಡಿ ಇವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಘಟಿತ ಅಪರಾಧ ಎಸಗಿದ ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದ್ದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಲಾಗುವುದುನಾರಾಯಣ ಭರಮನಿ ಡಿಸಿಪಿ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.