ADVERTISEMENT

ಡಿಕೆಶಿ ಆಸ್ತಿ ವಿವರ ಬಹಿರಂಗಪಡಿಸಲಿ: ಜೋಶಿ ಸವಾಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 9:25 IST
Last Updated 6 ಅಕ್ಟೋಬರ್ 2020, 9:25 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಶಾಸಕ, ಸಚಿವ ಆಗುವುದಕ್ಕಿಂತ ಮುಂಚೆ ಎಷ್ಟು ಆಸ್ತಿ ಇತ್ತು, ಈಗ ಎಷ್ಟಿದೆ ಎನ್ನುವುದನ್ನು ಬಹಿರಂಗಪಡಿಸಲಿ. ಆಗ, ಅವರ ನಿವಾಸದ ಮೇಲೆ ತನಿಖಾ ಸಂಸ್ಥೆಗಳು ಏಕೆ ದಾಳಿ ನಡೆಸುತ್ತಿವೆ ಎನ್ನುವುದು ಎಲ್ಲರಿಗೂ ತಿಳಿಯುತ್ತದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರಾಮಾಣಿಕ ಮತ್ತು ಸತ್ಯಹರಿಶ್ಚಂದ್ರನಂತೆ ಮಾತಾಡುವುದಕ್ಕಿಂತ ಆಸ್ತಿ ಎಷ್ಟಿದೆ ಎನ್ನುವುದನ್ನು ಶಿವಕುಮಾರ್‌ ತಿಳಿಸಲಿ. ರಾಜಕಾರಣಕ್ಕೆ ಬರುವುದಕ್ಕೆ ಮುನ್ನ ಅವರ ಜೀವನಶೈಲಿ ಹೇಗಿತ್ತು, ಈಗ ಹೇಗಿದೆ ಎನ್ನುವುದನ್ನೂ ಹೇಳಲಿ’ ಎಂದು ಸವಾಲು ಹಾಕಿದರು.

ADVERTISEMENT

ಚುನಾವಣೆಗಳು ಬಂದಾಗ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಮಾಡಿದ್ದನ್ನು ಈಗ ನಾವೂ ಮಾಡುತ್ತಿದ್ದೇವೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ’ ಎಂದರು.

‘ತನಿಖಾ ಸಂಸ್ಥೆಗಳು ಯಾವುದೇ ವ್ಯಕ್ತಿಯ ಮನೆ ಮೇಲೆ ದಾಳಿಗೆ ಆರು ತಿಂಗಳಿಂದಲೂ ತಯಾರಿ ಮಾಡಿಕೊಂಡಿರುತ್ತವೆ. ಮಾಹಿತಿ ಕಲೆ ಹಾಕಿರುತ್ತವೆ. ಶಿವಕುಮಾರ್‌ ಮನೆ ಮೇಲೆ ನಡೆದಿರುವುದು ಹಿಂದಿನ ಪ್ರಕರಣಗಳ ಮುಂದುವರಿದ ಭಾಗವಷ್ಟೆ’ ಎಂದು ಸಮರ್ಥಿಸಿಕೊಂಡರು.

ಮಹದಾಯಿ ಯೋಜನೆ ಮುಂದುವರಿಕೆ

‘ನನ್ನ ಪ್ರಕಾರ ಮಹದಾಯಿ ವಿವಾದ ತಾರ್ಕಿಕ‌ ಅಂತ್ಯ ಕಂಡಿದೆ. ನ್ಯಾಯಮಂಡಳಿ ತೀರ್ಪಿನ ಪ್ರಕಾರ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಪಡೆಯಲು ಕ್ರಮ ವಹಿಸಲಾಗಿದೆ. ಕೇಂದ್ರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ₹ 500 ಕೋಟಿ ಮೀಸಲಿಟ್ಟಿದೆ. ಯಾವುದೇ ಯೋಜನೆಗೆ ಪರಿಸರ ಅನುಮತಿ ಕಡ್ಡಾಯ. ಹೀಗಾಗಿ, ರಾಜ್ಯ ಸರ್ಕಾರದಿಂದ ಅನುಮತಿ ಕೋರಲಾಗಿದೆ’ ಎಂದು ತಿಳಿಸಿದರು.

‘ಗೋವಾ ಸರ್ಕಾರ ಅಲ್ಲಿನ ಜನರ ಹಿತಾಸಕ್ತಿಯಿಂದ ಏನಾದರೂ ಹೇಳಿಕೆ ಕೊಡಲಿ ಅಥವಾ ಕ್ರಮ ವಹಿಸಲಿ. ಆದರೆ, ಕಾನೂನು ಪ್ರಕಾರ ನಾವು ಸರಿಯಾಗಿದ್ದೇವೆ. ಯೋಜನೆಯನ್ನು ಮುಂದುವರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.