ಬೆಳಗಾವಿ: ‘ಪ್ರಭಾಕರ ಕೋರೆ ಅವರನ್ನು ನಾವು ಕಾಂಗ್ರೆಸ್‌ಗೆ ಆಹ್ವಾನಿಸಿಲ್ಲ. ಅವರು ಬರುವುದೂ ಇಲ್ಲ. ಸೌಹಾರ್ದ ಭೇಟಿಗಾಗಿ ಇಲ್ಲಿಗೆ ಬಂದು, ಜೋಳದ ರೊಟ್ಟಿ ಊಟ ಮಾಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಮನೆಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಪ್ರಭಾಕರ ಕೋರೆ ನಮಗೆ ಸ್ನೇಹಿತರು. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅವರು ಸಹಕಾರ ನೀಡುತ್ತಾರೆ. ‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಬರುವ ಗಣ್ಯರ ವಸತಿಗಾಗಿ ತಮ್ಮ ಶಿಕ್ಷಣ ಸಂಸ್ಥೆಗಳಿಂದ 170ಕ್ಕೂ ಅಧಿಕ ಕೊಠಡಿ ಕೊಟ್ಟಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಾಯ ಮಾಡುತ್ತಿದ್ದಾರೆ’ ಎಂದರು.
‘ಪ್ರಭಾಕರ ಕೋರೆ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೋರೆ ಅವರ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ಜತೆಗೆ, ಹೋರಾಟಕ್ಕೆ ಆರ್ಥಿಕವಾಗಿಯೂ ಸಹಾಯ ಮಾಡಿದೆ’ ಎಂದು ಹೇಳಿದರು.
‘ಸಾಮರ್ಥ್ಯಕ್ಕೆ ತಕ್ಕಂತೆ ಕೋರೆ ಅವರಿಗೆ ಸ್ಥಾನಮಾನ ಸಿಗಲಿಲ್ಲವೇ’ ಎಂಬ ಪ್ರಶ್ನೆಗೆ, ‘ಬಿಜೆಪಿಯವರ ಬಳಿ ಇದಕ್ಕೆ ಉತ್ತರ ಕೇಳಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.