ಗೋಕಾಕ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ (30) ಎಂಬುವರನ್ನು ಮುಸುಕುಧಾರಿ ಗುಂಪೊಂದು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪರಾರಿಯಾಗಿದೆ.
ಹತ್ಯೆ ಮಾಡಿದ ಆರೋಪಿಗಳೆನ್ನಲಾದ ಗಂಗಾರಾಮ ಸಂತ್ರಾಮ ಸಿಂಧೆ, ವಿನಾಯಕ ಹಡಗಿನಾಳ, ವಿಠ್ಠಲ ಪವಾರ ಹಾಗೂ ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇಲ್ಲಿನ ಆದಿಜಾಂಬವ ನಗರದ ತಮ್ಮ ಮನೆಯಲ್ಲಿದ್ದ ಸಿದ್ದಪ್ಪ ಅವರನ್ನು ಬುಧವಾರ ರಾತ್ರಿ ಹೊರಗೆಳೆದುಕೊಂಡು ಬಂದ ಆರೋಪಿಗಳು, ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಚಾಕುವಿನಿಂದ ಇರಿದು ಪರಾರಿಯಾದರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು.
ಕಲ್ಲುತೂರಾಟ
ಸಿದ್ದಪ್ಪ ಸಾವನ್ನಪ್ಪಿದ ಸುದ್ದಿ ನಗರದಲ್ಲಿ ಹರಡುತ್ತಿದ್ದಂತೆಯೇ ಅವರ ಬೆಂಬಲಿಗರು, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಭಯಭೀತರಾದ ವ್ಯಾಪಾರಸ್ಥರು ಮಧ್ಯಾಹ್ನವೇ ಅಂಗಡಿಗಳನ್ನು ಮುಚ್ಚಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಲಾಠಿ ಚಾರ್ಜ್ ಮಾಡಿ ಉದ್ರಿಕ್ತ ಜನರನ್ನು ಚದುರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.