ADVERTISEMENT

ಸ್ಮಶಾನಭೂಮಿ ಅತಿಕ್ರಮಣ ತೆರವಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 2:43 IST
Last Updated 21 ಫೆಬ್ರುವರಿ 2026, 2:43 IST
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯವರು ಶುಕ್ರವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯವರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಖಾನಾಪುರದ ಶಾಹೂ ನಗರದಲ್ಲಿ ಸರ್ವೆ ಸಂಖ್ಯೆ 93/1ಎನಲ್ಲಿದ್ದ ಡೊಂಬಾರ ಸಮಾಜದ ಪೂರ್ವಜರ ಸ್ಮಶಾನಭೂಮಿಯನ್ನು ಅತಿಕ್ರಮಣದಾರರಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಿದರು.

ಇಲ್ಲಿನ ಅಂಬೇಡ್ಕರ್‌ ಉದ್ಯಾನದಿಂದ ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಜಾಗದಲ್ಲಿ ಡೊಂಬಾರ ಸಮಾಜದ ಹಿರಿಯರು 300 ವರ್ಷಗಳಿಂದ ಅಂತ್ಯಸಂಸ್ಕಾರ ನೆರವೇರಿಸುತ್ತ ಬಂದಿದ್ದಾರೆ. ಇದರ ಮೇಲೆ ನಮ್ಮ ಸಮಾಜದ ಹಕ್ಕಿದೆ. ಆದರೆ, ಕೆಲವು ಪ್ರಭಾವಿಗಳು ಈಗ ಸ್ಮಶಾನದಲ್ಲಿದ್ದ ಮರ ಕಡಿದು, ಸಮಾಧಿಗಳ ಮೇಲೆಯೇ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ನಮಗೆ ಅಂತ್ಯಕ್ರಿಯೆಗೆ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅತಿಕ್ರಮಣ ತಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಗರಿಕರಿಂದ ಸಾಮೂಹಿಕವಾಗಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕು. ಯಾರದೇ ಒತ್ತಡಕ್ಕೂ ಮಣಿಯದೇ ಕೆಲಸ ಮಾಡಬೇಕು ಎಂದೂ ಎಚ್ಚರಿಕೆ ನೀಡಿದರು.

ಮುಖಂಡರಾದ ರಾಜಶೇಖರ ಹಿಂಡಲಗಿ, ಮಲ್ಲೇಶ ಚೌಗುಲೆ, ರಾಘವೇಂದ್ರ ಚಲವಾದಿ, ದುರ್ಗಪ್ಪ ದಂಡಿನವರ, ವಿಠ್ಠಲ ಸಗರಮ್ಮನವರ ಇತರರು ನೇತೃತ್ವ ವಹಿಸಿದ್ದರು.

ಸಿಟೀಸ್‌ 2.0: ಯೋಜನೆ ವೆಚ್ಚ ಕಡಿತಕ್ಕೆ ಆಕ್ರೋಶ ಬೆಳಗಾವಿ: ಬೆಳಗಾವಿಯಲ್ಲಿ ಸಿಟೀಸ್‌ 2.0 ಯೋಜನೆಯಡಿ ಕೈಗೆತ್ತಿಕೊಳ್ಳಬೇಕಿದ್ದ ₹135 ಕೋಟಿ ವೆಚ್ಚದ ಕಾಮಗಾರಿಗಳನ್ನು ₹75 ಕೋಟಿಗೆ ಇಳಿಸಿರುವುದನ್ನು ಖಂಡಿಸಿ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ  ವಿವಿಧ ಸಂಘಟನೆಯವರು ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಆರಂಭದಲ್ಲಿ ಈ ಯೋಜನೆಯಡಿ ₹135 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಈಗ ಯೋಜನಾ ವೆಚ್ಚವನ್ನು ₹60 ಕೋಟಿ ಕಡಿತಗೊಳಿಸಿದ ಮಾಹಿತಿ ದೊರೆತಿದೆ. ಹಾಗಾಗಿ ಈ ಹಿಂದೆ ಯೋಜಿಸಿದಂತೆಯೇ ಕಾಮಗಾರಿ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮತ್ತು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ ಅವರಿಗೆ ಮನವಿ ಸಲ್ಲಿಸಿದರು. ‘ನಮಗೆ ₹75 ಕೋಟಿ ಅನುದಾನ ಮಂಜೂರಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.  ಮುಖಂಡರಾದ ರಾಜಕುಮಾರ ಟೋಪಣ್ಣವರ ಸುಜಿತ ಮುಳಗುಂದ ಆಯೇಷಾ ಸನದಿ ಸತೀಶ ಪಾಟೀಲ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.