ADVERTISEMENT

ಬೆಳಗಾವಿ: ಜಿಲ್ಲಾಡಳಿತ ತೆಕ್ಕೆಗೆ ಕನ್ನಡ ಭವನ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:10 IST
Last Updated 26 ಜೂನ್ 2025, 5:10 IST
ಬೆಳಗಾವಿಯ ನೆಹರೂ ನಗರದಲ್ಲಿ ನಿರ್ಮಿಸಿದ ಕನ್ನಡ ಭವನದ ಒಳಾಂಗಣ
ಬೆಳಗಾವಿಯ ನೆಹರೂ ನಗರದಲ್ಲಿ ನಿರ್ಮಿಸಿದ ಕನ್ನಡ ಭವನದ ಒಳಾಂಗಣ   

ಬೆಳಗಾವಿ: ಇಲ್ಲಿನ ನೆಹರೂ ನಗರದಲ್ಲಿ ಸರ್ಕಾರಿ ಅನುದಾನದಲ್ಲಿ ನಿರ್ಮಿಸಿರುವ ‘ಕನ್ನಡ ಭವನ’ದ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದ್ದಾರೆ. ಈ ಮೂಲಕ ಹೈಟೆಕ್‌ ಭವನವನ್ನು ಜಿಲ್ಲಾಡಳಿತ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಬೆಂಗಳೂರಿನಲ್ಲಿ ಮೇ 6ರಂದು ನಡೆದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸದಸ್ಯ ಅಶೋಕ ಚಂದರಗಿ ಅವರು, ಕನ್ನಡ ಭವನ ನಿರ್ವಹಣೆ ವಿಚಾರ ಪ್ರಸ್ತಾಪಿಸಿದ್ದರು.

‘ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಲ್ಲಿ ನಿರ್ಮಿಸಿದ ಕನ್ನಡ ಭವನವನ್ನು ನಿರ್ವಹಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದ್ದರು. 

ADVERTISEMENT

‘ಕನ್ನಡ ಭವನದಲ್ಲಿ ವಾಣಿಜ್ಯ ಮಳಿಗೆ ತೆರೆಯಲಾಗಿದೆ. ಆದರೆ, ಅವುಗಳಿಂದ ಸಂಗ್ರಹವಾಗುವ ಮೊತ್ತವನ್ನು ಖಾಸಗಿ ಸಂಘಟನೆ ಸ್ವಂತಕ್ಕೆ ಬಳಸಿಕೊಳ್ಳುತ್ತಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗಾಗಿ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಕಟ್ಟಡದಲ್ಲಿ ವಾಣಿಜ್ಯ ಮಳಿಗೆ ತೆರೆದಿದ್ದು ಸರಿಯಾದ ಕ್ರಮವಲ್ಲ’ ಎಂದು ಆಕ್ಷೇಪಿಸಿದ್ದರು. ಜತೆಗೆ, ‘ಈ ಕಟ್ಟಡದಿಂದ ಸಂಗ್ರಹವಾಗುವ ಮೊತ್ತವನ್ನು ಪ್ರಾಧಿಕಾರದ ಕಾಮಗಾರಿಗಳು ಮತ್ತು ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು ಸೂಕ್ತ’ ಎಂದು ಒತ್ತಾಯಿಸಿದ್ದರು.

‘2010-11ನೇ ಸಾಲಿನಿಂದ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಿಸಿದ ಎಲ್ಲ ಕನ್ನಡ ಭವನಗಳನ್ನು ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿಗಳು ನಿರ್ವಹಿಸುತ್ತಿವೆ. ಬೆಳಗಾವಿಯಲ್ಲಿನ ಭವನವನ್ನು ಇದೇ ಮಾದರಿಯಲ್ಲಿ ನಿರ್ವಹಿಸಬೇಕು’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 

ಗಡಿ ಪ್ರದೇಶಗಳ ಸಮಸ್ಯೆಗಳ ಕುರಿತು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಮೇ 29ರಂದು ನಡೆದ ಸಭೆಯಲ್ಲಿ, ಕನ್ನಡ ಭವನದ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಶಿಫಾರಸು ಮಾಡಿದ್ದರು.

ಹಾಗಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ₹3.27 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹2.99 ಕೋಟಿ ಅನುದಾನದಲ್ಲಿ ನಿರ್ಮಿಸಿದ ಕನ್ನಡ ಭವನದ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಪ್ರಾಧಿಕಾರದ ಕಾರ್ಯದರ್ಶಿಯನ್ನು ಅದರ ಕಾಯಂ ಸದಸ್ಯರನ್ನಾಗಿ ನೇಮಿಸಬೇಕು. ಭವನದ ಆವರಣದಲ್ಲಿ ಇರುವ ವಾಣಿಜ್ಯ ಮಳಿಗೆಗಳ ಬಗ್ಗೆ ಸರ್ಕಾರದ ನಿಯಮಾನುಸಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗಿತ್ತು.

ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯವನ್ನು ಕನ್ನಡ ಭವನದ ನಿರ್ವಹಣೆಗೆ ಬಳಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರಿಂದ ದಿನಕ್ಕೆ ₹500ರಿಂದ ₹1 ಸಾವಿರ ಬಾಡಿಗೆ ಶುಲ್ಕ ಮಾತ್ರ ಪಡೆಯಬೇಕು
ಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಕನ್ನಡ ಭವನದ ನಿರ್ವಹಣೆಗೆ ಶೀಘ್ರ ಸಮಿತಿ ರಚಿಸುತ್ತೇವೆ. ಜತೆಗೆ ಸಭೆ ನಡೆಸಿ ಮುಂದಿನ ಕ್ರಮ ವಹಿಸುತ್ತೇವೆ
ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ
ಏನೇನು ಜವಾಬ್ದಾರಿ?
ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾಯಂ ಸದಸ್ಯರು ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಬೆಳಗಾವಿ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳಗಾವಿ ಕಾರ್ಯನಿರ್ವಾಹಕ ಎಂಜಿನಿಯರ್ ಕೆಆರ್‌ಐಡಿಎಲ್‌ ಬೆಳಗಾವಿ ಕಾರ್ಯನಿರ್ವಾಹಕ ಎಂಜಿನಿಯರ್ ನಿರ್ಮಿತಿ ಕೇಂದ್ರದ ಬೆಳಗಾವಿ ಯೋಜನಾ ನಿರ್ದೇಶಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಸದಸ್ಯರಾಗಿದ್ದಾರೆ. ಒಂದು ವಾರದೊಳಗಾಗಿ ಸಮಿತಿ ಸದಸ್ಯರು ಕನ್ನಡ ಭವನ ಅದರ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಆಕ್ಷೇಪಣೆ ಪರಿಶೀಲಿಸುತ್ತಾರೆ. ವಾಣಿಜ್ಯ ಮಳಿಗೆಗಳಿಂದ ಸಂಗ್ರಹಿಸಿದ ಬಾಡಿಗೆ ಮತ್ತು ದಾಖಲೆಗಳ ವಿವರಗಳನ್ನು ಸದಸ್ಯ ಕಾರ್ಯದರ್ಶಿ ಸಂಗ್ರಹಿಸಿ ನಿರ್ವಹಣಾ ಸಮಿತಿ ಮುಂದೆ ಮಂಡಿಸುತ್ತಾರೆ. ನಂತರ ಅಧ್ಯಕ್ಷರ ಅನುಮೋದನೆಯೊಂದಿಗೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮಾಹಿತಿ ಸಲ್ಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.