ADVERTISEMENT

ಬೆಳಗಾವಿ: ನಾಮಪತ್ರ ಸ್ವೀಕಾರ- ಮಾರ್ಗಸೂಚಿ ಪಾಲಿಸಿ; ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 17:01 IST
Last Updated 18 ಆಗಸ್ಟ್ 2021, 17:01 IST
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆರಂಭಿಸಿರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆರಂಭಿಸಿರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು   

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆರಂಭಿಸಲಾಗಿರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಪಾಲಿಕೆಯ ಮುಖ್ಯ ಕಚೇರಿ, ವಿಶ್ವೇಶ್ವರಯ್ಯ ನಗರ, ಗೋವಾವೇಸ್‌ನಲ್ಲಿರುವ ಪಾಲಿಕೆ ಕಚೇರಿ, ಕೊನವಾಳಗಲ್ಲಿ ಹಾಗೂ ಅಶೋಕ ನಗರದಲ್ಲಿ ಇರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಅವರು ಭೇಟಿ ನೀಡಿದರು.

‘ಪ್ರಕ್ರಿಯೆ ವೇಳೆ ಗೊಂದಲ ಉಂಟಾಗದಂತೆ ನಗರದ‌ ವಿವಿಧ ಕಡೆಗಳಲ್ಲಿ ನಾಮಪತ್ರ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ವಾರ್ಡ್‌ಗಳ ಅಭ್ಯರ್ಥಿಗಳಿಗೆ ಅನುಕೂಲ ಆಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರಗಳ ಸಲ್ಲಿಕೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಪಾಲಿಕೆಯ ಉಪ ಆಯುಕ್ತೆ ಲಕ್ಷ್ಮಿ ನಿಪ್ಪಾಣಿಕರ ಮತ್ತು ಅಧಿಕಾರಿಗಳು ಇದ್ದರು.

ನಿರ್ದೇಶನಗಳು: ‘ನಗರಪಾಲಿಕೆಗೆ ಸಾರ್ವತ್ರಿಕ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಕೋವಿಡ್–19 ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ನಿರ್ದೇಶನಗಳನ್ನು ನೀಡಿದ್ದು, ಅದನ್ನು ಪಾಲಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೂಚಿಸಿದ್ದಾರೆ.

‘ಅಭ್ಯರ್ಥಿಯೂ ಸೇರಿ ಗರಿಷ್ಟ ಐವರೊಂದಿಗೆ ಫೇಸ್ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ಯಾವುದೇ ವಾಹನಗಳನ್ನು ಬಳಸುವುದನ್ನು ಹಾಗೂ ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಪ್ರಚಾರದ ಸಂದರ್ಭದಲ್ಲಿ ಫೇಸ್ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ವಿದ್ಯುನ್ಮಾನ ಮಾಧ್ಯಮ ಬಳಸಿ ಪ್ರಚಾರ ಕೈಗೊಳ್ಳಬಹುದು. ಅವುಗಳ ವೆಚ್ಚ ವಿವರಗಳನ್ನು ಸಲ್ಲಿಸಬೇಕು. ಅಲ್ಲದೇ, ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಆಗಲೂ ಕಡ್ಡಾಯವಾಗಿ ಫೇಸ್ ಮಾಸ್ಕ್ ಮತ್ತು ಕೈ ಗವಸು ಹಾಕಿರಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.