
ಬೆಳಗಾವಿ: ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಡಿಸಿಸಿ ಬ್ಯಾಂಕ್‌ನ ನಾಲ್ಕು ಕ್ಷೇತ್ರಗಳ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಮಾಜಿ ಸಂಸದರಾದ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಮುಖಂಡ ನಾನಾಸಾಹೇಬ ಪಾಟೀಲ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದರೆ, ಏಳು ಸ್ಥಾನಗಳಿಗೆ ಅ.19ರಂದು ಚುನಾವಣೆ ನಡೆದಿತ್ತು.
ಅಂದು ಸಂಜೆಯೇ ರಾಮದುರ್ಗ, ಅಥಣಿ ಹಾಗೂ ರಾಯಬಾಗ ಕ್ಷೇತ್ರಗಳ ನಿರ್ದೇಶಕರ ಸ್ಥಾನದ ಫಲಿತಾಂಶ ಪ್ರಕಟವಾಗಿತ್ತು. ಹುಕ್ಕೇರಿ, ನಿಪ್ಪಾಣಿ, ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ಕ್ಷೇತ್ರಗಳಿಂದ ಗೆದ್ದವರು ಯಾರು, ಸೋತವರು ಯಾರು ಎಂಬುದು ಖಚಿತವಾಗಿದ್ದರೂ, ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ಆಗಿರಲಿಲ್ಲ.
ಈಗ ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯದಿಂದ ಆದೇಶ ದೊರೆತ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶ್ರವಣ ನಾಯ್ಕ ಅವರು ಭಾನುವಾರ ಮತ ಎಣಿಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಪ್ರಕಟಿಸಿದರು.
‘ನ್ಯಾಯಾಲಯದ ಆದೇಶದಂತೆ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿದೆ. ನಿಪ್ಪಾಣಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಸಂಬಂಧಿಸಿ ಚಲಾವಣೆಯಾದ ಮತಗಳಲ್ಲಿ ಏಳು ಮತ ಎಣಿಸದಂತೆ ನ್ಯಾಯಾಲಯದ ಸೂಚನೆ ಇತ್ತು. ಹಾಗಾಗಿ ಏಳು ಮತ ಬಿಟ್ಟು ಉಳಿದವನ್ನು ಎಣಿಸಿ ಫಲಿತಾಂಶ ಪ್ರಕಟಿಸಲಾಗಿದೆ’ ಎಂದರು.
ಯಾರಿಗೆ ಎಷ್ಟು ಮತ?:
ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ ಕತ್ತಿ 59 ಮತ ಪಡೆದು ರಾಜೇಂದ್ರ ಪಾಟೀಲ(32 ಮತ) ಅವರನ್ನು ಸೋಲಿಸಿದರೆ, ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ ಜೊಲ್ಲೆ71 ಮತ ಪಡೆದು ಮುಖಂಡ ಉತ್ತಮ ಪಾಟೀಲ(48 ಮತ) ಅವರನ್ನು ಪರಾಭವಗೊಳಿಸಿದರು.
ಬೈಲಹೊಂಗಲ ಕ್ಷೇತ್ರದಲ್ಲಿ ಮಹಾಂತೇಶ ದೊಡ್ಡಗೌಡರ 54 ಮತ ಪಡೆದು ಗೆದ್ದರೆ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ 21 ಮತಗಳನ್ನಷ್ಟೇ ಪಡೆದು ಸೋತರು. ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ನಾನಾಸಾಹೇಬ ಪಾಟೀಲ ಅವರು 17 ಮತಗಳೊಂದಿಗೆ ಗೆದ್ದರೆ, ವಿಕ್ರಮ ಇನಾಮದಾರ 15 ಮತ ಪಡೆದರು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನ.10ರಂದು ಮಧ್ಯಾಹ್ನ 3ಕ್ಕೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.