ADVERTISEMENT

ಜೀವಂತವಿರುವ ವ್ಯಕ್ತಿಯ ಕುಟುಂಬದವರಿಗೆ ಶವ ಕೊಟ್ಟರು!

​ಪ್ರಜಾವಾಣಿ ವಾರ್ತೆ
Published 3 ಮೇ 2021, 20:11 IST
Last Updated 3 ಮೇ 2021, 20:11 IST
ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರತೆಗೆದು ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರತೆಗೆದು ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.   

ಮೋಳೆ (ಬೆಳಗಾವಿ ಜಿಲ್ಲೆ): ಬೆಳಗಾವಿಯ ಆಸ್ಪತ್ರೆಯೊಂದು ಮೃತ ದೇಹವೊಂದನ್ನು ವಾರಸುದಾರರಲ್ಲದವರಿಗೆ ನೀಡಿ ಗೊಂದಲ ಸೃಷ್ಟಿಸಿದ ಹಾಗೂ ತಾಲ್ಲೂಕು ಆಡಳಿತಕ್ಕೂ ಮುಜುಗರ ಉಂಟು ಮಾಡಿದ ಘಟನೆ ಕಾಗವಾಡ ತಾಲ್ಲೂಕಿನ ಮೋಳೆಯಲ್ಲಿ ನಡೆದಿದೆ.

ಆಸ್ಪತ್ರೆಯ ಸಿಬ್ಬಂದಿ ಗೊಂದಲ ಮಾಡಿಕೊಂಡು, ಬೇರೆಯವರ ಶವವನ್ನು ಜೀವಂತವಿರುವ ವ್ಯಕ್ತಿಯ ವಾರಸುದಾರರಿಗೆ ನೀಡಿದ್ದಾರೆ.

ಗ್ರಾಮದ 82 ವಯಸ್ಸಿನ ವ್ಯಕ್ತಿ ಕೋವಿಡ್ ದೃಢಪಟ್ಟಿದ್ದರಿಂದ ಮೇ 1ರಂದು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಕುಟುಂಬದವರಿಗೆ ಕರೆ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ, ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತರಾಗಿದ್ದಾರೆ ಎಂದು ತಿಳಿಸಿದ್ದರು. ಶವವನ್ನು ಪ್ಯಾಕ್‌ ಮಾಡಿ ಕಳುಹಿಸಿದ್ದರು.

ADVERTISEMENT

ಕೋವಿಡ್‌ ಕಾರಣದಿಂದಾಗಿ ಆ ಕುಟುಂಬದವರು, ಮುಖವನ್ನು ಸರಿಯಾಗಿ ಗಮನಿಸದೆ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದಾದ ಕೆಲವು ಗಂಟೆಗಳಲ್ಲಿ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ, ನಿಮ್ಮ ರೋಗಿ ಬದುಕಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಆ ಕುಟುಂಬ ನಿಟ್ಟುಸಿರು ಬಿಡುವ ಜೊತೆಗೆ ಗೊಂದಲಕ್ಕೂ ಒಳಗಾಗಿತ್ತು. ಆಸ್ಪತ್ರೆಯವರ ನಿರ್ಲಕ್ಷ್ಯದ ಬಗ್ಗೆ ಕುಟುಂಬದವರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದರೆ, ನಾವು ಅಂತ್ಯಕ್ರಿಯೆ ನೆರವೇರಿಸಿದ್ದು ಯಾರ ಶವ ಎನ್ನುವ ಗೊಂದಲಕ್ಕೆ ಆ ಕುಟುಂಬ ಒಳಗಾಗಿತ್ತು.

ನಿಜವಾದ ವಾರಸುದಾರರಿಗೆ ಶವ ಹಸ್ತಾಂತರಿಸುವುದಕ್ಕಾಗಿ ಆಸ್ಪತ್ರೆಯವರು ಪರದಾಡಿದ್ದಾರೆ. ಈ ನಡುವೆ, ಮೃತರ ಪುತ್ರ ಶವ ನೀಡುವಂತೆ ಕಾಗವಾಡ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ತಹಶೀಲ್ದಾರ್‌ ಪ್ರಮೀಳಾ ದೇಶಪಾಂಡೆ ಮಧ್ಯಪ್ರವೇಶಿಸಿದ್ದಾರೆ. ಹೂತಿದ್ದ ಶವವನ್ನು ಜೆಸಿಬಿಯಿಂದ ತೆಗೆದು ತಹಶೀಲ್ದಾರ್‌, ಕಾಗವಾಡ ಪಿಐ ಹಣಮಂತ ಧರ್ಮಟ್ಟಿ ಮತ್ತು ಉಪ ತಹಶೀಲ್ದಾರ್‌ ಅಣ್ಣಪ್ಪ ಕೋರೆ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.