ADVERTISEMENT

ರೈತ ಸಮುದಾಯದ ಉಳಿವಿಗಾಗಿ ಬಿಜೆಪಿ ಸೋಲಿಸಲು ತೀರ್ಮಾನ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 3 ಮೇ 2024, 8:40 IST
Last Updated 3 ಮೇ 2024, 8:40 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಬೆಳಗಾವಿ: ‘ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕೃಷಿಕರ ಉಳಿವಿಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಿರ್ಧರಿಸಿದ್ದೇವೆ’ ಎಂದು ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಸ್ವಾತಂತ್ರ್ಯ ನಂತರ ಅಧಿಕಾರ ಹಿಡಿದ ಎಲ್ಲ ಸರ್ಕಾರಗಳಿಂದ ಕೃಷಿಕರಿಗೆ ಅನ್ಯಾಯವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ರೈತರು ಹೆಚ್ಚಿನ ಸಮಸ್ಯೆ ಎದುರಿಸಿದ್ದಾರೆ. ಕೇಂದ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಆದರೂ, ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ₹5 ಸಾವಿರ ಕೋಟಿ‌ ಮೀಸಲಿಟ್ಟಿದ್ದೇವೆ ಎಂದು ಘೋಷಿಸಿದ್ದರೂ, ಒಂದೇ ರೂಪಾಯಿ ಅನುದಾನ‌ ಬಿಡುಗಡೆಗೊಳಿಸಲಿಲ್ಲ. ರೈತ ಸಮುದಾಯ ಉಳಿಸುವುದಕ್ಕಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕಿದೆ’ ಎಂದರು.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ‘ಕಳೆದೊಂದು ದಶಕದಲ್ಲಿ ಕೃಷಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆದರೆ, ಮೋದಿ ಸುಳ್ಳು ಹೇಳುತ್ತ ಮೋಸ ಮಾಡುತ್ತಿದ್ದಾರೆ. ಫಸಲ್ ಬೀಮಾ ವಿಮೆ ಯೋಜನೆಯಡಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಇವೆಲ್ಲ ಕಾರಣಕ್ಕಾಗಿ ಈ ಬಾರಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಈ ಬಾರಿ ಮತ ನೀಡದಂತೆ ನಿರ್ಣಯ ತೆಗೆದುಕೊಂಡಿದ್ದೇವೆ’ ಎಂದರು.

ADVERTISEMENT

‘ರಾಜ್ಯದ ಜನರು ಬರ ಮತ್ತು ಪ್ರವಾಹದಿಂದ ತತ್ತರಿಸಿದ ವೇಳೆ ಬಾರದ ಮೋದಿ, ಈಗ ಚುನಾವಣೆ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರಿಗೆ ಈ ಸಲದ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ’ ಎಂದು ತಿಳಿಸಿದರು.

ಮುಖಂಡರಾದ ಬಸವರಾಜ ಮೊಖಾಶಿ, ರವಿಕಿರಣ, ಸುರೇಶ ಕರವಿನಕೊಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.