ADVERTISEMENT

ಮೂಡಲಗಿ: ಗೋವು ಪೂಜಿಸಿ ದೀಪಾವಳಿ ಆಚರಣೆ

ಬಾಲಶೇಖರ ಬಂದಿ
Published 3 ನವೆಂಬರ್ 2021, 13:07 IST
Last Updated 3 ನವೆಂಬರ್ 2021, 13:07 IST
ಮೂಡಲಗಿಯ ಮಹಾಲಿಂಗಯ್ಯ ಹಿರೇಮಠ ಅವರ ತೋಟದಲ್ಲಿ ದೀಪಾವಳಿ ಹಬ್ಬವನ್ನು ಗೋವು ಮತ್ತು ಕರುವಿನ ಪೂಜೆ ಮಾಡುವ ಮೂಲಕ ಆಚರಿಸಲಾಯಿತು
ಮೂಡಲಗಿಯ ಮಹಾಲಿಂಗಯ್ಯ ಹಿರೇಮಠ ಅವರ ತೋಟದಲ್ಲಿ ದೀಪಾವಳಿ ಹಬ್ಬವನ್ನು ಗೋವು ಮತ್ತು ಕರುವಿನ ಪೂಜೆ ಮಾಡುವ ಮೂಲಕ ಆಚರಿಸಲಾಯಿತು   

ಮೂಡಲಗಿ: ಭಾರತೀಯ ಪರಂಪರೆಯಲ್ಲಿ ದೀಪಾವಳಿ ಹಬ್ಬವು ವಿಶೇಷವಾಗಿದೆ. ಕೃಷಿ ಪ್ರಧಾನವಾದ ಭಾರತದಲ್ಲಿ ಕೆಲವು ಕಡೆಯಲ್ಲಿ ದೀಪಾವಳಿಯನ್ನು ಗೋವಿನ ಹಬ್ಬ ಎಂದು ಕರೆಯುತ್ತಾರೆ. ಗೋವುಗಳ ಪೂಜೆಗೆ ವಿಶೇಷ ಮಹತ್ವ ನೀಡುತ್ತಾರೆ. ಉತ್ತರ ಕರ್ನಾಟಕದಲ್ಲೂ ಕೆಲವು ಕೃಷಿ ಕುಟುಂಬಗಳು ದೀಪಾವಳಿ ಸಂದರ್ಭದಲ್ಲಿ ಗೂವು ಮತ್ತು ಕರುವಿಗೆ ಪೂಜೆಯನ್ನು ಸಲ್ಲಿಸುವ ಆಚರಣೆಯು ನಡೆದುಬಂದಿದೆ.

ಮೂಡಲಗಿಯ ಕೆಲವು ಕೃಷಿ ಹಿನ್ನೆಲೆಯ ಕುಟುಂಬಗಳು ಗೋವು ಪೂಜೆಯ ಆಚರಣೆ ನಡೆಸಿಕೊಂಡು ಬರುತ್ತಿವೆ. ದೈವ ಸ್ವರೂಪಿಯಾಗಿರುವ ಗೋವು ರೈತರ ಜೀವನಾಡಿಯಾಗಿದೆ. ದೀಪಾವಳಿಯ 3ನೇ ದಿನ ‘ಬಲಿಪಾಡ್ಯಮಿ’ಯಂದು ಮತ್ತು ಕೆಲವು ಕಡೆಯಲ್ಲಿ ‘ನೀರು ತುಂಬುವ ಹಬ್ಬದ’ ಮುನ್ನಾ ದಿನ ಗೋವುಗಳ ಪೂಜೆ ನೆರವೇರಿಸುತ್ತಾರೆ. ಗೋವು ಪೂಜೆಯೊಂದಿಗೆ ದೀಪಾವಳಿ ಹಬ್ಬವನ್ನು ಪ್ರಾರಂಭಿಸುವ ವಾಡಿಕೆಯೂ ಇದೆ. ಗೋವು ಮತ್ತು ಅದರ ಕರುವನ್ನು ಶುಚಿಗೊಳಿಸಿ ಹೂವು– ಹಾರಗಳಿಂದ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ.

ಗೋವಿಗಾಗಿ ಪ್ರತ್ಯೇಕವಾಗಿ ಸಿದ್ಧಗೊಳಿಸಿದ ಕಡಬು, ಹೋಳಿಗೆ ಜೊತೆಗೆ ಹಣ್ಣುಗಳನ್ನು ತಿನ್ನಿಸಿ ನಮನ ಸಲ್ಲಿಸುತ್ತಾರೆ. ಐವರು ಮುತ್ತೈದೆಯರಿಗೆ ಉಡಿ ತುಂಬುವ ಸಂಪ್ರದಾಯವೂ ಇದೆ.

ADVERTISEMENT

ಇಲ್ಲಿನ ಮಹಾಲಿಂಗಯ್ಯ ಹಿರೇಮಠ ಅವರ ತೋಟದಲ್ಲಿ ಸೋಮವಾರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಆಕಳು ಮತ್ತು ಕರುವಿಗೆ ಪೂಜೆ ಸಲ್ಲಿಸಿದರು.

‘ರೈತಾಪಿ ಜನರು ಹಸುಗಳನ್ನು ಮಾರದೆ ಅವುಗಳನ್ನು ಉತ್ತಮವಾಗಿ ಸಾಕಿ ಕೃಷಿಗೆ ಪೂರಕವಾಗುವಂತೆ ಮಾಡಿಕೊಳ್ಳಬೇಕು ಎನ್ನುವುದು ದೀಪಾವಳಿಯ ಗೋವು ಪೂಜೆಯ ಹಿನ್ನೆಲೆಯಾಗಿದೆ. ಇಂಥ ಸಂಪ್ರದಾಯಗಳು ಮುಂದುವರಿಯಬೇಕು’ ಎಂದು ಗೋದ್ರೇಜ್‌ ಅಗ್ರೋವೆಟ್‌ ಪ್ರಾದೇಶಿಕ ವ್ಯವಸ್ಥಾಪಕ ಮನೋಜ ಕುಮಾರ ಹೇಳಿದರು.

‘ಈ ಬಾರಿ ದೀಪಾವಳಿ ಹಿನ್ನೆಲೆಯಲ್ಲಿ ಆಕಳು ಮತ್ತು ಕರುವಿನ ಪೂಜೆಯನ್ನು ಸಂಭ್ರಮದಿಂದ ಮಾಡಿದೆವು’ ಎಂದು ಮಹಾಲಿಂಗಯ್ಯ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.