ADVERTISEMENT

ಸಿಗದ ಪ್ರವೇಶ: ವಿದ್ಯಾರ್ಥಿಗಳಿಗೆ ತೊಂದರೆ

ಒಂದು ವರ್ಷ ಸಮಯ ಕಳೆದುಕೊಳ್ಳುವ ಭೀತಿ

ಎಂ.ಮಹೇಶ
Published 28 ನವೆಂಬರ್ 2020, 19:31 IST
Last Updated 28 ನವೆಂಬರ್ 2020, 19:31 IST

ಬೆಳಗಾವಿ: ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಅಂತ್ಯಗೊಳಿಸಿರುವುದರಿಂದಾಗಿ ನೂರಾರು ವಿದ್ಯಾರ್ಥಿಗಳು ದಾಖಲಾತಿಯಿಂದ ವಂಚಿತರಾಗಿದ್ದಾರೆ.

ಕೋವಿಡ್–19 ಭೀತಿ ನಡುವೆಯೂ ನಡೆಸಲಾಗಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದವರು ನಂತರ ಪೂರಕ ಪರೀಕ್ಷೆ ತೆಗೆದುಕೊಂಡಿದ್ದರು. ಇಂತಹ ನೂರಾರು ವಿದ್ಯಾರ್ಥಿಗಳಿದ್ದಾರೆ. ಅವರು ಬರೆದಿದ್ದ ಪರೀಕ್ಷೆಯ ಫಲಿತಾಂಶವನ್ನು ನ.13ರಂದು ಪ್ರಕಟಿಸಲಾಗಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನುನ. 10ರಂದೇ ನಿಲ್ಲಿಸಲಾಗಿದೆ!

‘ಸರ್ಕಾರವು, ಪೂರಕ ಪರೀಕ್ಷೆ ತೆಗೆದುಕೊಂಡ ತಮ್ಮ ಹಿತ ಕಡೆಗಣಿಸಿ ವೇಳಾಪಟ್ಟಿ ನಿಗದಿಪಡಿಸಿದೆ. ಇದರಿಂದಾಗಿ ನಮಗೆ ಒಂದು ವರ್ಷ ವ್ಯರ್ಥವಾಗುವ ಭೀತಿ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭವಿಷ್ಯ ಕಡೆಗಣಿಸಿದೆ:‘ಮುಖ್ಯ ಪರೀಕ್ಷೆಗೆ ಹಾಜರಾಗದವರು ಅಥವಾ ಅನುತೀರ್ಥರಾದವರು ಪೂರಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಅಲ್ಲಿ ಪಾಸಾಗಿ ಪದವಿಗೆ ಸೇರಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ, ಈ ಬಾರಿ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸಿದೆ’ ಎಂದು ಅಳಲು ತೋಡಿಕೊಂಡರು.

‘ಫಲಿತಾಂಶ ಪ್ರಕಟವಾದ ಮರು ದಿನವೇ ಗೋಕಾಕದ ಎಂಎಚ್‌ಎಸ್ ಕಾಲೇಜಿಗೆ ಅರ್ಜಿ ಸಲ್ಲಿಸಲು ಹೋಗಿದ್ದೆ. ಅಲ್ಲಿ, ಪ್ರವೇಶ ಅವಧಿ ಮುಗಿದಿದೆ ಎಂದು ತಿಳಿಸಿದರು. ಬಳಿಕ ಜೆಎಸ್‌ಎಸ್ ಕಾಲೇಜಿಗೂ ಹೋಗಿದ್ದೆ. ಅಲ್ಲೂ ಅವಕಾಶ ಸಿಗಲಿಲ್ಲ. ವಿಚಾರಿಸಲು, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಕ್ಯಾಂಪಸ್‌ಗೆ ಹೋದರೆ ಅಲ್ಲಿನ ಸಿಬ್ಬಂದಿ ಸಮರ್ಪಕ ಮಾಹಿತಿ ಕೊಡಲಿಲ್ಲ. ಕಾಲೇಜಿನವರು ಆರ್‌ಸಿಯುನಲ್ಲಿ ಹಾಗೂ ಆರ್‌ಸಿಯುನವರು ಕಾಲೇಜಿನಲ್ಲಿ ವಿಚಾರಿಸಿ ಎಂದು ಅಲೆದಾಡಿಸಿದರು. ಇದರಿಂದ ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಗೋಕಾಕದ ವಿದ್ಯಾರ್ಥಿ ರಾಹುಲ್ ಕವತನಹಳ್ಳಿ ತಿಳಿಸಿದರು.

ನಿರಾಕರಿಸಲಾಗುತ್ತಿದೆ:‘ಶುಕ್ರವಾರ ಕುಲಪತಿ ಅವರನ್ನು ಭೇಟಿಯಾಗಿದ್ದೆವು. ಅವರೂ ಕೈಚೆಲ್ಲಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವರ್ಷ ಕಳೆದುಕೊಳ್ಳುವುದು ಎಂದರೆ ದೊಡ್ಡ ನಷ್ಟವಾಗುತ್ತದೆ. ಜಿಲ್ಲೆಯೊಂದರಲ್ಲೇ ಎರಡು ಸಾವಿರ ವಿದ್ಯಾರ್ಥಿಗಳಿಗೆ ಈ ರೀತಿ ತೊಂದರೆಯಾಗಿದೆ. ಪದವಿ ಕಾಲೇಜುಗಳಲ್ಲಿ ಸೀಟು ನಿರಾಕರಿಸಲಾಗುತ್ತಿದೆ. ಮುಂದಿನ ವರ್ಷ ಬನ್ನಿ ಎನ್ನುತ್ತಿದ್ದಾರೆ’ ಎಂದು ಹೇಳಿದರು.

‘ಧಾರವಾಡದ ಐ.ಬಿ. ಅಣ್ಣಿಗೇರಿ ಪಿಯು ಕಾಲೇಜಿನಲ್ಲಿ ಓದಿದ ನಾನು, ಅನಾರೋಗ್ಯದ ಕಾರಣದಿಂದಾಗಿ ದ್ವಿತೀಯ ಪಿಯು ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪೂರಕ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣನಾಗಿದ್ದೇನೆ. ಆದರೆ, ಅದರಿಂದ ಪ್ರಯೋಜನ ಆಗದಂತಾಗಿದೆ. ಉನ್ನತ ಶಿಕ್ಷಣ ಪಡೆಯಲು ಸರ್ಕಾರದ ನಿಯಮಗಳೇ ಅಡ್ಡಿಯಾಗಿವೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ವಿದ್ಯಾರ್ಥಿಗಳ ಹಿತ ಕಾಪಾಡಬೇಕು’ ಎಂದು ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ಸರ್ಕಾರ ಹಾಗೂ ಯುಜಿಸಿ ಮಾರ್ಗಸೂಚಿ ಪ್ರಕಾರ ನಾವು ಪ್ರವೇಶ ಪ್ರಕ್ರಿಯೆ ಅಂತ್ಯಗೊಳಿಸಿದ್ದೇವೆ. ಪರೀಕ್ಷೆಯ ದಿನಾಂಕವನ್ನೂ ನಿಗದಿಪಡಿಸಿದ್ದೇವೆ. ಅವಕಾಶ ಸಿಕ್ಕಿಲ್ಲವೆಂದು ಅನೇಕ ವಿದ್ಯಾರ್ಥಿಗಳು ನನ್ನ ಬಳಿಗೂ ಬಂದಿದ್ದರು. ಅವರಿಗೆ ಮಾರ್ಗಸೂಚಿ ಬಗ್ಗೆ ತಿಳಿಸಿದ್ದೇನೆ’ ಎಂದು ಹೇಳಿದರು.

***

ಸರ್ಕಾರದಿಂದ ಪದವಿ ಕೋರ್ಸ್‌ಗಳ ಪ್ರವೇಶದ ಅವಧಿ ವಿಸ್ತರರಣೆ ಮಾಡಿ ಆದೇಶ ಬಂದರೆ ನಾವು ಆ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬಹುದಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರವಿದಲ್ಲ

ಪ್ರೊ.ಎಂ. ರಾಮಚಂದ್ರಗೌಡ, ಕುಲಪತಿ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.