ಬೆಳಗಾವಿ: ‘ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ₹30 ಸಾವಿರ ಕೋಟಿ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿಡಬೇಕು’ ಎಂದು ಆಡಿ ಹಂದಿಗುಂದದ ಶಿವಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ 135ನೇ ಜಯಂತಿ ಮಹೋತ್ಸವ ಪ್ರಯುಕ್ತ, ‘ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿ’ ಎಂಬ ಧ್ಯೇಯವಾಕ್ಯದೊಂದಿಗೆ ಶನಿವಾರ ನಡೆದ ಜಾಗೃತಿ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೆಸರಿಗೆ ಮಾತ್ರ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾಯಿತು. ಆದರೆ, ಜನರ ಬದುಕು ಸುಧಾರಿಸಲಿಲ್ಲ. ಬಹಳ ವರ್ಷಗಳಿಂದಲೂ ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರಿದೇ ಇದೆ. ಇದಕ್ಕೆ ಕಡಿವಾಣ ಬೀಳದಿದ್ದರೆ, ಪ್ರತ್ಯೇಕ ರಾಜ್ಯದ ಬೇಡಿಕೆಗೆ ಮತ್ತೆ ಧ್ವನಿ ಬರಲಿದೆ’ ಎಂದು ಎಚ್ಚರಿಕೆ ಕೊಟ್ಟರು.
‘ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಉತ್ತರ ಕರ್ನಾಟಕದ ಹಳ್ಳಿ–ಹಳ್ಳಿಗಳಿಂದ ಜನರು ಹೋರಾಟಕ್ಕೆ ಧುಮುಕುತ್ತಾರೆ. ಅದಕ್ಕಿಂತ ಮುನ್ನವೇ ಈ ಭಾಗಕ್ಕೆ ಅನ್ಯಾಯ ಸರಿಪಡಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.
‘ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಎಂಬಂತೆ, 10 ದಿನಗಳ ಅಧಿವೇಶನ ನಡೆಸಿದರೆ ಸಾಲದು. ಬದಲಿಗೆ 30 ದಿನಗಳವರೆಗೆ ಪೂರ್ಣ ಪ್ರಮಾಣದ ಅಧಿವೇಶನ ನಡೆಸಬೇಕು. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ರಾಜ್ಯಮಟ್ಟದ ಎಲ್ಲ ಇಲಾಖೆಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಈ ವಿಚಾರವಾಗಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಜಾಥಾಕ್ಕೆ ಚಾಲನೆ ಕೊಟ್ಟರು. ಅಲ್ಲಿಂದ ಹೊರಟ ಜಾಥಾ ಮತ್ತು ಶಿವಬಸವ ಶ್ರೀಗಳ ಭಾವಚಿತ್ರದ ಮೆರವಣಿಗೆ ರಾಣಿ ಚನ್ನಮ್ಮನ ವೃತ್ತ, ಬಿ.ಆರ್.ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ ಮಾರ್ಗವಾಗಿ ಸಾಗಿ, ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಆವರಣ ತಲುಪಿತು.
ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಕಾರಂಜಿಮಠದ ಶಿವಯೋಗಿ ದೇವರು, ತೆಲಂಗಾಣದ ವಿರೂಪಾಕ್ಷಿ ದೇವರು, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಡಾ.ರವಿ ಪಾಟೀಲ, ಅಶೋಕ ಮಳಗಲಿ ಇತರರಿದ್ದರು. ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.