ಮೂಡಲಗಿ: ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ಹಿರಿತನ ಆಧಾರದಲ್ಲಿ ವೇತನ ನಿಗದಿಗೊಳಿಸಬೇಕು, ಕನಿಷ್ಠ ವೇತನ ₹31,000 ಸಾವಿರ ನಿಗದಿಯಾಗಬೇಕು, ಪ್ರತಿ ಗ್ರಾಮ ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನೇಮಕ, ಪಿಂಚಣಿ ಸೌಲಭ್ಯ ಜಾರಿಯಾಗಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಗ್ರಾಮ ಪಂಚಾಯಿತಿ ನೌಕರರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹೊಳಿ ಮತ್ತು ಉಪಾಧ್ಯಕ್ಷ ರಾಜು ದೊಡಮನಿ ಮಾತನಾಡಿ, ‘ಕೆಲವು ಪಂಚಾಯಿತಿಗಳಲ್ಲಿ ಕಡಿಮೆ ಸಂಬಳದಲ್ಲಿ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅನುಕಂಪ ಆಧಾರದ ಮೇಲೆ ನೇಮಕಾತಿಗಳಾಗಿಲ್ಲ, ಬಾಕಿ ಉಳಿದಿರುವ ಶಿಕ್ಷಣ ಅರ್ಹತೆ ಇಲ್ಲದ ಅನುಮೋದನೆ ಪ್ರಕರಣಗಳನ್ನು ಜಿಲ್ಲಾ ಪಂಚಾಯಿತಿ ಕಳಿಸುವಂತಾಗಬೇಕು, ಕಚೇರಿ ಮುಂದೆ ನಿತ್ಯ ಧ್ವಜಾರೋಹಣ ಮಾಡುವ ಸಿಬ್ಬಂದಿಗೆ ₹60 ಸಂಬಳ ನೀಡುವ ಆದೇಶವು ಜಾರಿಯಾಗಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್. ಚಿನ್ನನವರ ಅವರು ಪ್ರತಿಭಟನಕಾರರು ಮನವಿ ಸ್ವೀಕರಿಸಿ ಮೇಲಧಿಕಾರಿಗಳಿಗೆ ಕಳಿಸುವುದಾಗಿ ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಬಸವರಾಜ ಮಿರ್ಜಿ, ಗೂಳಪ್ಪ ಹೊಸೂರ, ಗುಲಾಬ ಪಿರಜಾದೆ, ಶಿದ್ದರಾಯ ಬಟಕೋರಿ, ಶಿವಯ್ಯ ಅಂಬಲಿಮಠ, ಮಹಾಂತೇಶ ಕುಂದರಗಿ, ಸಿದ್ದಪ್ಪ ಹುಲಕುಂದ, ಆರ್.ಬಿ. ಕೆಂಚಪ್ಪಗೋಳ, ಸತೀಶ ಶಿರಗನ್ನವರ, ಮಹಾಂತೇಶ ಕುಂದರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.