ADVERTISEMENT

ಚನ್ನಮ್ಮನ ಕಿತ್ತೂರು: ಮದ್ಯ ಮಳಿಗೆ ಸ್ಥಳಾಂತರಕ್ಕೆ ಆಗ್ರಹ– ಅಹೋರಾತ್ರಿ ಧರಣಿ ಆರಂಭ

ಚನ್ನಮ್ಮನ ಕಿತ್ತೂರು ಮಹಿಳೆಯರು ಸೇರಿ ಸಾರ್ವಜನಿಕರು ಶುಕ್ರವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 9:24 IST
Last Updated 6 ಡಿಸೆಂಬರ್ 2024, 9:24 IST
   

ಚನ್ನಮ್ಮನ ಕಿತ್ತೂರು: ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ಐಎಲ್ ಮದ್ಯದ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ಮಹಿಳೆಯರು ಸೇರಿ ಸಾರ್ವಜನಿಕರು ಶುಕ್ರವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಮದ್ಯ ಮಳಿಗೆ ಅಂಗಡಿ ಮುಂದೆ ಶಾಮಿಯಾನ ಹಾಕಿ ಕುಳಿತು ಪ್ರತಿಭಟನೆ ನಡೆಸಿದ ಮಹಿಳೆಯರು, ಪ್ರಕರಣ ಇತ್ಯರ್ಥ ಆಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು.

ನಮಗೆ ನ್ಯಾಯ ಸಿಗದಿದ್ದರೆ, ರಾಣಿ ಚನ್ನಮ್ಮ ವರ್ತುಲ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ADVERTISEMENT

ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ದಶಕದಿಂದ ಹೋರಾಟ ಮಾಡುತ್ತ ಬರಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಸ್ಪಂದಿಸಿದಂತೆ ಮಾಡುತ್ತಾರೆ. ಆಗ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸುತ್ತೇವೆ. ನಂತರ ಸ್ಥಳಾಂತರಕ್ಕೆ ಗಮನ ಹರಿಸುವುದಿಲ್ಲ. ದಶಕದಿಂದ ಅಧಿಕಾರಿಗಳು ಇಲ್ಲಿನ ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಬಂದಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.

ಅಧಿಕಾರಿ ಎದುರು ಪಟ್ಟು

ನಮಗೆ ರಾಜಕೀಯ ಬೇಡ. ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಅಬಕಾರಿ ಅಧಿಕಾರಿ ಎದುರು ಪಟ್ಟು ಹಿಡಿದರು.

ಚನ್ನಮ್ಮ ಹಿರೇಮಠ, ನೀಲವ್ವ ತಿಮ್ಮಾಪುರ, ಮಹಾದೇವಿ ಹಾಲ್ಮಠ, ಅನ್ನಪೂರ್ಣ ಪಾಟೀಲ, ರೇಖಾ ಕಾಜಗಾರ, ಕಸ್ತೂರಿ ತಿಮ್ಮಾಪುರ, ಗೌರವ್ವ ಅಂಗಡಿ, ನಿರ್ಮಲಾ ಪಾಟೀಲ, ಕಾವ್ಯಾ ಹಿರೇಮಠ, ಮಹಾದೇವಿ ಪಾಟೀಲ, ಸುಮಂಗಲಾ ಹೊಸೂರ, ಗೌರವ್ವ ಹಾಲ್ಮಠ, ಪ್ರವೀಣ ಸರದಾರ ಪಾಲ್ಗೊಂಡಿದ್ದಾರೆ.

ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.