ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನ ಕಾಲದ ಗಡಾದ ಮರಡಿ ಮೇಲಿನ ಐತಿಹಾಸಿಕ ವೀಕ್ಷಣಾ ಗೋಪುರವು ಅವೈಜ್ಞಾನಿಕ ಕಾಮಗಾರಿಯಿಂದ ಕುಸಿದು ಬಿದ್ದು ಏಳು ತಿಂಗಳು ಕಳೆದಿದೆ. ಅದರ ದುರಸ್ತಿಗೆ ತುರ್ತಾಗಿ ಕ್ರಮ ವಹಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಮರಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೇ ಗೋಪುರದ ಮಧ್ಯಭಾಗದಲ್ಲಿ 80 ಅಡಿ ಎತ್ತರದ ಧ್ವಜಸ್ತಂಭ ಅಳವಡಿಸಲಾಗಿತ್ತು. ಈ ಸ್ತಂಭದಲ್ಲಿ 16X24 ಅಡಿ ವಿಶಾಲ ಅಳತೆಯ ಧ್ವಜವನ್ನು ಆ.15 ಮತ್ತು ಜ.26 ರಂದು ಆರೋಹಣ ಮಾಡಲಾಗುತ್ತಿತ್ತು.
ಬೃಹತ್ ಗಾತ್ರದ ಧ್ವಜ ಹಾರಾಡಿ ಇಲ್ಲಿನವರ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಗೋಪುರದ ಅರ್ಧಭಾಗ ಕಳೆದ ಬಾರಿ ಮಳೆಗೆ ಕುಸಿದು ಬಿತ್ತು. ಬಿದ್ದ ನಂತರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ‘ಇಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ನಾಮಫಲಕ ತೂಗು ಹಾಕಿದರು. ಆ ನಾಮಫಲಕ ಈಗ ಮಾಯವಾಗಿದೆ. ಆದರೆ, ಮರಡಿ ಹಾಗೇ ಬಿದ್ದುಕೊಂಡಿದೆ ಎನ್ನುತ್ತಾರೆ ಸ್ಥಳೀಯರು.
‘ಗಡಾದ ಮರಡಿಗೆ ಐತಿಹಾಸಿಕ ಹಿನ್ನೆಲೆ ಇದೆ. ಸಂಸ್ಥಾನ ಕಾಲದಲ್ಲಿ ಇದು ಕಾವಲು ಗೋಪುರವಾಗಿತ್ತು. ವೈರಿ ಪಡೆ ಬರುವುದನ್ನು ಈ ಗೋಪುರದ ಮೇಲೆ ನಿಂತು ನಿರಂತರವಾಗಿ ಕಾವಲು ಮಾಡಲಾಗುತ್ತಿತ್ತು’ ಎನ್ನುತ್ತಾರೆ ಹಿರಿಯರು.
‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಬೈರೇಗೌಡ ಅವರೂ ಈ ಬಿದ್ದ ಗೋಪುರ ವೀಕ್ಷಿಸಿ, ದುರಸ್ತಿಯ ಭರವಸೆ ನೀಡಿ ಹೋಗಿದ್ದಾರೆ. ಆದರೆ, ಭರವಸೆಯಾಗಿಯೇ ಉಳಿದಿದೆ’ ಎಂಬುದು ಅವರ ದೂರು.
ಐತಿಹಾಸಿಕ ಹಿನ್ನೆಲೆ ಇರುವ ಗಡಾದ ಮರಡಿ ಮೇಲಿರುವ ಕಾವಲು ಗೋಪುರ ಕಳಚಿ ಬಿದ್ದು ಕೆಲ ತಿಂಗಳಾಗಿದೆ. ಪ್ರಾಧಿಕಾರ ಅದನ್ನು ಪುನರ್ ನಿರ್ಮಿಸಬೇಕು. ಈ ಬಗ್ಗೆ ಅಲಕ್ಷ್ಯ ಮಾಡುವುದು ಸರಿಯಲ್ಲಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಪೀಠಾಧಿಕಾರಿ ರಾಜಗುರು ಸಂಸ್ಥಾನ ಕಲ್ಮಠ
ಕುಸಿದಿರುವ ಐತಿಹಾಸಿಕ ಗಡಾದ ಮರಡಿ ಮೇಲಿರುವ ಗೋಪುರ ದುರಸ್ತಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಸಚಿವ ಕೃಷ್ಣಬೈರೇಗೌಡ ಅವರಿಗೂ ತೋರಿಸಲಾಗಿದೆ. ದುರಸ್ತಿಗೆ ಸರ್ಕಾರದಿಂದ ಅನುದಾನ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದುಬಾಬಾಸಾಹೇಬ ಪಾಟೀಲ ಶಾಸಕ ಚನ್ನಮ್ಮನ ಕಿತ್ತೂರು
ಐತಿಹಾಸಿಕ ಗಡಾದ ಮರಡಿ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ ಪ್ರಾಧಿಕಾರಕ್ಕೆ ಹಸ್ತಾಂತರವೂ ಆಗಿಲ್ಲ. ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆಪ್ರಭಾವತಿ ಫಕೀರಪುರ ಆಯುಕ್ತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.