ADVERTISEMENT

ಅಕ್ಷಯ ತೃತೀಯ: ಚಿನ್ನಾಭರಣ, ವಾಹನಗಳ ಖರೀದಿ ಜೋರು, ಕೋಟ್ಯಂತರ ರೂಪಾಯಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 7 ಮೇ 2019, 15:30 IST
Last Updated 7 ಮೇ 2019, 15:30 IST
ಬೆಳಗಾವಿಯ ಪೋತದಾರ್ ಬ್ರದರ್ಸ್‌ ಚಿನ್ನಾಭರಣ ಮಳಿಗೆಯಲ್ಲಿ ಮಂಗಳವಾರ ಕಂಡುಬಂದ ನೋಟ
ಬೆಳಗಾವಿಯ ಪೋತದಾರ್ ಬ್ರದರ್ಸ್‌ ಚಿನ್ನಾಭರಣ ಮಳಿಗೆಯಲ್ಲಿ ಮಂಗಳವಾರ ಕಂಡುಬಂದ ನೋಟ   

ಬೆಳಗಾವಿ: ಅಕ್ಷಯ ತೃತೀಯ ಅಂಗವಾಗಿ ನಗರ, ತಾಲ್ಲೂಕು ಕೇಂದ್ರ ಮೊದಲಾದ ಸ್ಥಳಗಳಲ್ಲಿ ಮಂಗಳವಾರ ಚಿನ್ನ, ಬೆಳ್ಳಿ ಆಭರಣಗಳು, ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಖರೀದಿ ಭರಾಟೆ ಜೋರಾಗಿ ನಡೆಯಿತು. ಮಳಿಗೆಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ಗ್ರಾಹಕರಿಂದ ತುಂಬಿ ಹೋಗಿದ್ದವು.

‘ಈ ಶುಭ ದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ, ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಇರುವುದರಿಂದಾಗಿ ಚಿನ್ನಾಭರಣಗಳಿಗೆ ಬಹಳ ಬೇಡಿಕೆ ಕಂಡುಬಂತು. ಬರಗಾಲದ ನಡುವೆಯೂ ಗ್ರಾಹಕರು ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಆಭರಣ ಮಳಿಗೆಗಳ ಮುಂದೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಖಡೇಬಜಾರ್‌, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರ ಭಾಗದಲ್ಲಿ ಅತಿಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಇದರೊಂದಿಗೆ, ತನಿಷ್ಕ್‌, ಮಲಬಾರ್, ಜೋಯಾಲುಕ್ಕಾಸ್‌, ಪಿ.ಎನ್‌. ಗಾಡ್ಗೀಳ್‌, ಕಲ್ಯಾಣ್‌, ಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ ಮೊದಲಾದ ದೊಡ್ಡ ಮಳಿಗೆಗಳಲ್ಲೂ ಗ್ರಾಹಕರು ಕಿಕ್ಕಿರಿದು ತುಂಬಿದ್ದರು. ಚಿನ್ನವು ಪ್ರತಿ ಗ್ರಾಂ.ಗೆ ₹ 3,310ರ ಆಸುಪಾಸು ಮಾರಾಟವಾಗಿದ್ದು, ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿನ ವಹಿವಾಟು ನಡೆದಿದೆ.

ADVERTISEMENT

ಈ ಮುಂಚೆಯೇ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿದ್ದ ಅನೇಕರು ಸಂಪೂರ್ಣ ಹಣ ಪಾವತಿಸಿ ಆಭರಣಗಳನ್ನು ಖರೀದಿಸಿದರು. ಕೆಲವರು, ಸಿದ್ಧವಾಗಿದ್ದ ಆಭರಣಗಳನ್ನು ಸ್ಥಳದಲ್ಲೇ ಖರೀದಿಸಿದರು.

ಜಿಲ್ಲೆಯಲ್ಲಿ ಬೆಳಗಾವಿ ನಗರವೊಂದರಲ್ಲೇ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಬಹುತೇಕ ಎಲ್ಲ ಕಡೆಗಳಲ್ಲೂ ಉತ್ತಮ ವ್ಯಾಪಾರ ನಡೆದಿದೆ. ಜಿಲ್ಲೆಯವರ ಜೊತೆ ಸಮೀಪದಲ್ಲಿರುವ ಮಹಾರಾಷ್ಟ್ರದ ಪ್ರದೇಶಗಳಿಂದಲೂ ಗ್ರಾಹಕರು ಬಂದಿದ್ದರು. ₹ 20 ಕೋಟಿಗೂ ಹೆಚ್ಚಿನ ವಹಿವಾಟು ಆಗಿರುವ ಅಂದಾಜಿಸಲಾಗಿದೆ.

‘ಎಲ್ಲ ರೀತಿಯ ಆಭರಣಗಳಿಗೂ ಬೇಡಿಕೆ ಕಂಡುಬಂತು. ಗ್ರಾಹಕರು ಅವರ ಸಾಮರ್ಥ್ಯ ಆಧರಿಸಿ ಆಭರಣಗಳನ್ನು ಖರೀದಿಸಿದರು. ಚಿನ್ನ ಖರೀದಿಸಲು ಸಾದ್ಯವಾಗದವರು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡರು. ಬಂಗಾರದ ಉಂಗುರ, ನೆಕ್ಲೇಸ್, ಸರಗಳು, ಮೂಗುತಿ, ಓಲೆ, ಬಳೆ ಮೊದಲಾದವುಗಳಿಗೆ ಬೇಡಿಕೆ ಇತ್ತು. ಕೆಲವರು ಸಿದ್ಧವಾದ ಆಭರಣಗಳನ್ನು ಖರೀದಿಸಿದರೆ, ಕೆಲವರು ಮುಂಚಿತವಾಗಿಯೇ ಆರ್ಡರ್‌ ಕೊಟ್ಟಿದ್ದರು. ಮದುವೆ ಸಂದರ್ಭವಾಗಿರುವುದರಿಂದ ಮಂಗಳಸೂತ್ರಗಳಿಗೆ ಬೇಡಿಕೆ ಇತ್ತು’ ಎಂದು ವ್ಯಾಪಾರಿಗಳು ತಿಳಿಸಿದರು.

ವಾಹನಗಳ ಷೋರೋಂಗಳಲ್ಲಿ ದ್ವಿಚಕ್ರವಾಹನ ಹಾಗೂ ಕಾರುಗಳ ಖರೀದಿಯೂ ದೊಡ್ಡ ಪ್ರಮಾಣದಲ್ಲಿತ್ತು. ಹೊಸ ವಾಹನಗಳಿಗೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಜನರು ಮುಗಿಬಿದ್ದರು. ಬಟ್ಟೆ ಅಂಗಡಿಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ಶೋರೂಂಗಳಲ್ಲೂ ಗ್ರಾಹಕರು ತುಂಬಿದ್ದರು.

‘ಲೋಕಸಭಾ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಯಲ್ಲಿ ಇದ್ದರಿಂದ ಚಿನ್ನಾಭರಣ ಖರೀದಿ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು. ಆದರೆ, ಅಕ್ಷಯ ತೃತೀಯ ದಿನವಾದ ಮಂಗಳವಾರ ನಮ್ಮ ನಿರೀಕ್ಷೆಗೂ ಮೀರಿ ಗ್ರಾಹಕರು ಬಂದರು. ನಮ್ಮ ಅಂಗಡಿ ಹೌಸ್‌ಫುಲ್ ಆಗಿತ್ತು. ನಗರದಾದ್ಯಂತ ₹ 200 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿರುವ ಅಂದಾಜಿದೆ. ರಾತ್ರಿಯಾದರೂ ಗ್ರಾಹಕರು ಬರುತ್ತಲೇ ಇದ್ದರು’ ಎಂದು ಚಿನ್ನಾಭರಣ ವ್ಯಾಪಾರಿ ಅನಿಲ್ ‍‍ಪೋತದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.