ADVERTISEMENT

ಮನೆ ಹಾನಿ ಪರಿಹಾರ; ಸಂತ್ರಸ್ತರ ಅಪಸ್ವರ

ಒಂದೇ ಮನೆಗೂ ಅಷ್ಟೇ, ಬಹುಮಹಡಿ ಮನೆಗಳಿಗೂ ಅಷ್ಟೆನಾ?

ಶ್ರೀಕಾಂತ ಕಲ್ಲಮ್ಮನವರ
Published 24 ಆಗಸ್ಟ್ 2019, 19:31 IST
Last Updated 24 ಆಗಸ್ಟ್ 2019, 19:31 IST

ಬೆಳಗಾವಿ: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷೆಯು ಜಿಲ್ಲೆಯಲ್ಲಿ ಸಾಗಿದ್ದು, ಹೆಚ್ಚಿನ ನಷ್ಟ ಉಂಟಾದವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಸಂತ್ರಸ್ತರಿಂದ ಕೇಳಿಬಂದಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ನದಿಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಜಿಲ್ಲೆಯ ಸುಮಾರು 350 ಹಳ್ಳಿ– ಪಟ್ಟಣಗಳ ಅಂದಾಜು 42,290 ಮನೆಗಳು ಹಾನಿಗೊಳಗಾಗಿವೆ. ಕೆಲವು ಮನೆಗಳು ಭಾಗಶಃ ಹಾನಿಯಾಗಿದ್ದರೆ, ಇನ್ನುಳಿದವು ಸಂಪೂರ್ಣ ಹಾನಿಗೊಳಗಾಗಿವೆ.

ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಧಿಕಾರಿಗಳು ಮಾಡುತ್ತಿದ್ದಾರೆ. ಪಿ.ಡಿ.ಒ, ಎಂಜಿನಿಯರ್‌ ಹಾಗೂ ಗ್ರಾಮ ಲೆಕ್ಕಿಗ ಅವರನ್ನೊಳಗೊಂಡ ತಂಡವು, ಸಮೀಕ್ಷೆ ನಡೆಸುತ್ತಿದೆ.

ADVERTISEMENT

ಪರಿಹಾರವೆಷ್ಟು?:

ಶೇ 25ರಷ್ಟು ಮನೆ ಹಾನಿಗೊಳಗಾಗಿದ್ದರೆ ₹ 25,000, ಶೇ 75ರಷ್ಟು ಹಾನಿಗೊಳಗಾಗಿದ್ದರೆ ₹ 1 ಲಕ್ಷ, ಅದಕ್ಕಿಂತ ಹೆಚ್ಚು ಅಥವಾ ಸಂಪೂರ್ಣ ನಾಶವಾಗಿದ್ದರೆ ₹ 5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಮನೆ ಹಾನಿಯ ಸಮೀಕ್ಷೆ ಹಂತಹಂತವಾಗಿ ನಡೆಯುತ್ತಿದೆ. ಬಾಧಿತರ ವಿವರಗಳನ್ನು ಹಾಗೂ ಹಾನಿಯಾಗಿರುವ ಪ್ರಮಾಣವನ್ನು ಅಧಿಕಾರಿಗಳು ನಮೂದಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಪರಿಹಾರಕ್ಕೆ ಒತ್ತಾಯ:

ಮನೆಯ ಅಳತೆ ಹಾಗೂ ಹಾನಿಯ ಪ್ರಮಾಣ ನೋಡಿಕೊಂಡು ಪರಿಹಾರ ನೀಡಬೇಕು ಎಂದು ಕೆಲವು ಸಂತ್ರಸ್ತರು ಒತ್ತಾಯಿಸುತ್ತಿದ್ದಾರೆ.

‘20x30 ಅಳತೆಯ ಮನೆ ಬಿದ್ದಾಗಲೂ ಅಷ್ಟೇ 40x60 ಮನೆ ಬಿದ್ದಾಗಲೂ ಅಷ್ಟೇ ಪರಿಹಾರ ನೀಡುವುದು ಸರಿಯಲ್ಲ. ದೊಡ್ಡ ಅಳತೆಯ ಮನೆ ಬಿದ್ದಾಗ ಹೆಚ್ಚಿನ ನಷ್ಟ ಉಂಟಾಗಿರುತ್ತದೆ. ಅದಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು’ ಎಂದು ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಸಂತೋಷ ಕಾಮತ ಒತ್ತಾಯಿಸಿದರು.

‘ಬಹುಮಹಡಿ ಮನೆಗಳು ನಾಶವಾಗಿದ್ದರೆ, ನಷ್ಟ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿರುತ್ತದೆ. ಸಹೋದರರು ಸೇರಿಕೊಂಡು ಒಂದೇ ಜಾಗದಲ್ಲಿ 2– 3 ಮಹಡಿ ಕಟ್ಟಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದಾಗಲೂ ₹ 5 ಲಕ್ಷ ಪರಿಹಾರ ನೀಡುವುದು ಸೂಕ್ತವಾಗಲ್ಲ’ ಎಂದು ಹೇಳಿದರು.

ನಿಯಮಾವಳಿಯಂತೆ ಕ್ರಮ

‘ಆ.14ರಂದು ಸರ್ಕಾರದಿಂದ ಬಂದಿರುವ ಮಾರ್ಗಸೂಚಿಯ ಪ್ರಕಾರ, ಜನರು ವಾಸವಿರುವ ಮನೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ. ಅದರ ಪ್ರಕಾರ, ಒಂದು ಮನೆಗೆ ನಷ್ಟ ಪರಿಹಾರ ನೀಡಲಾಗುತ್ತಿದೆ. ಮನೆಯ ಅಳತೆಯನ್ನಾಗಲಿ, ಮಹಡಿಗಳನ್ನಾಗಲಿ ಅಥವಾ ಅಲ್ಲಿ ವಾಸವಾಗಿರುವ ಜನರನ್ನು ಪರಿಗಣಿಸಿಲ್ಲ’ ಎಂದು ಚಿಕ್ಕೋಡಿಯ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ತಿಳಿಸಿದರು.

‘ದೊಡ್ಡ ಅಳತೆಯ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಕೆಲವು ಕಡೆ ಗ್ರಾಮಸ್ಥರು ಸಮೀಕ್ಷೆಯ ಅಧಿಕಾರಿಗಳಿಗೆ ಒತ್ತಾಯಿಸಿರುವುದು ಗಮನಕ್ಕೆ ಬಂದಿದೆ. ಆದರೆ, ನಾವು ಸರ್ಕಾರದ ಸೂಚನೆ ಪಾಲಿಸಬೇಕಾಗಿದೆ. ಒಂದೆರಡು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, ವರದಿ ನೀಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.