ADVERTISEMENT

ಬೆಳಗಾವಿಯಲ್ಲಿ ಅಧಿವೇಶನ: ಮಾಸಾಂತ್ಯದೊಳಗೆ ಘೋಷಿಸಿ

ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 16:18 IST
Last Updated 16 ಜುಲೈ 2021, 16:18 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ವಿಧಾನಮಂಡಲ ಮಳೆಗಾಲದ ಅಧಿವೇಶನವನ್ನು ಈ ಬಾರಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಸಬೇಕು. ಈ ಬಗ್ಗೆ ರಾಜ್ಯ ಸರ್ಕಾರವು ಜುಲೈ 30ರೊಳಗೆ ಘೋಷಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಪೂಜಾರಿ ತಿಳಿಸಿದರು.

‘ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಇಲ್ಲಿ ಎರಡು ವರ್ಷಗಳಿಂದ ಅಧಿವೇಶನ ನಡೆಸಿಲ್ಲ. ಮಳೆಗಾಲದ ಅಧಿವೇಶನವನ್ನು ಇಲ್ಲಿ 2 ತಿಂಗಳವರೆಗೆ ನಡೆಸಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಗ್ರಹಿಸಿದರು.

‘ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಕಟ್ಟಡ ಭೂತಬಂಗಲೆಯಂತಾಗಿದೆ. ಸರ್ಕಾರ ವರ್ಷಕೊಮ್ಮೆ ಜಾತ್ರೆಗೆ ಬಂದಂತೆ ಬಂದು ಹೋಗದೆ ಅದರ ಸದ್ಬಳಕೆಗೆ ಕ್ರಮ ವಹಿಸಬೇಕು. ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಈ ಭಾಗದ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬೆಳಗಾವಿಯಲ್ಲಿ ಅಧಿವೇಶನ ನಡೆಯಬೇಕೆಂದು ಈ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತದೆ ಇರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಕಲ್ಯಾಣರಾವ್ ಮುಚಳಂಬಿ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ಅವರು 2017ರಲ್ಲಿ ಹೇಳಿದ್ದರು. ಶ್ರೀಗಳ ಎದುರು ಭರವಸೆ ನೀಡಿದ್ದರು. ಆದರೆ, ಅದು ಇಲ್ಲಿಯವರೆಗೂ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಗಾವಿಯಲ್ಲಿಯೇ ಇದ್ದ ಸಕ್ಕರೆ ಆಯುಕ್ತರ ಕಚೇರಿಯನ್ನು ರದ್ದು ಮಾಡಿ ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ. ಈಗ ಪ್ರಾದೇಶಿಕ ಆಯುಕ್ತರ ಕಚೇರಿಯನ್ನೂ ರದ್ದುಪಡಿಸುವ ಚಿಂತನೆ ಸರ್ಕಾರದಲ್ಲಿ ನಡೆದಿದೆ. ಇದರಿಂದ ಈ ಭಾಗದ ಜನರು ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿನತ್ತ ಮುಖ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಾದೇಶಿಕ ಆಯುಕ್ತ ಕಚೇರಿ ರದ್ದುಪಡಿಸಬಾರದು. ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.

‘ಈ ಭಾಗದ ಜನತೆಗೆ ಅನ್ಯಾಯ ಮುಂದುವರಿದಿರೆ, ಹೋರಾಟ ತೀವ್ರಗೊಳಿಸುತ್ತಾರೆ. ಆಗ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ ಆಗುತ್ತದೆ’ ಎಂದರು.

ಮುಖಂಡರಾದ ಎಂ.ಟಿ. ಪಾಟೀಲ, ರಾಮಚಂದ್ರ ಢವಳಿ, ಮಹಾಂತೇಶ ಗೋಕಾಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.