ADVERTISEMENT

ವಾಣಿಜ್ಯ ವಿದ್ಯಾಸಂಸ್ಥೆಗಳ ಪ್ರಮಾಣಪತ್ರಕ್ಕೆ ಮಾನ್ಯತೆ: ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 13:07 IST
Last Updated 28 ನವೆಂಬರ್ 2021, 13:07 IST

ಬೆಳಗಾವಿ: ‘ಸರ್ಕಾರದಿಂದ ಮಾನ್ಯತೆ ಪಡೆದ ವಾಣಿಜ್ಯ ವಿದ್ಯಾಸಂಸ್ಥೆಗಳಲ್ಲಿ ಕಂಪ್ಯೂಟರ್ ತರಬೇತಿ ಪಡೆದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಿದ ಪರೀಕ್ಷೆಗಳಲ್ಲಿ ಗಳಿಸಿದ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎಲ್ಲ ನೇಮಕಾತಿಗಳಿಗೂ ಪರಿಗಣಿಸಬೇಕು’ ಎಂದು ರಾಜ್ಯ ವಾಣಿಜ್ಯ ವಿದ್ಯಾಶಾಲೆಗಳ ಸಂಘದ ಗೌರವ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ನಮ್ಮ ಸಂಸ್ಥೆಗಳಲ್ಲಿ ತರಬೇತಿ ಗಳಿಸಿದವರ ಪ್ರಮಾಣಪತ್ರಗಳಿಗೆ ನೇಮಕಾತಿ ವೇಳೆ ಮಾನ್ಯತೆ ನೀಡದಿರುವುದು ಖಂಡನೀಯ’ ಎಂದರು.

‘ಸರ್ಕಾರದಿಂದಲೇ ಪಠ್ಯಕ್ರಮ ಮಾನ್ಯಗೊಳಿಸಿ, ಪರೀಕ್ಷೆಗಳನ್ನು ನಡೆಸಿ, ಹಾಗೂ ಸರ್ಕಾರವೇ ನೀಡಿದ ಪ್ರಮಾಣಪತ್ರಗಳನ್ನು ಮಾನ್ಯ ಮಾಡದಿರುವುದು ಯಾವ ನ್ಯಾಯ?’ ಎಂದು ಕೇಳಿದರು.

ADVERTISEMENT

‘ರಾಜ್ಯದಲ್ಲಿ ಈ ಹಿಂದ 1,800 ವಾಣಿಜ್ಯ ವಿದ್ಯಾಶಾಲೆಗಳು ಬೆರಳಚ್ಚು ಮತ್ತು ಶೀಘ್ರಲಿಪಿ ತರಬೇತಿ ನೀಡುತ್ತಿದ್ದವು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್‍ಇಇಬಿ)ಯೇ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡುತ್ತಿತ್ತು. ವಿವಿಧ ಹುದ್ದೆಗಳ ನೇಮಕಾತಿಗೂ ಸರ್ಕಾರ ಇದನ್ನು ಪರಿಗಣಿಸುತ್ತಿತ್ತು. ಆದರೆ, ಕಂಪ್ಯೂಟರ್ ಬಳಕೆ ಹೆಚ್ಚಾದ ನಂತರ 400 ಶಾಲೆಗಳಷ್ಟೇ ಉಳಿದಿವೆ. 2015ರಿಂದ ಕಂಪ್ಯೂಟರ್ ತರಬೇತಿ (ವರ್ಷದ ಆಫೀಸ್ ಆಟೊಮೆಷನ್ ಮತ್ತು ಗ್ರಾಫಿಕ್ ಡಿಸೈನ್ ಕೋರ್ಸ್) ನೀಡುತ್ತಿದ್ದು, ಕೆಎಸ್‍ಇಇಬಿಯೇ ಪರೀಕ್ಷೆ ಸಂಘಟಿಸುತ್ತಿದೆ. ಈವರೆಗೆ 60ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಆದರೆ, ವರನ್ನು ಸರ್ಕಾರದ ಯಾವ ನೇಮಕಾತಿಗೂ ಪರಿಗಣಿಸುತ್ತಿಲ್ಲ’ ಎಂದು ವಿವರ ನೀಡಿದರು.

‘ನಮ್ಮಲ್ಲಿ ತರಬೇತಿ ಪಡೆದವರನ್ನು ಸರ್ಕಾರಿ ಹುದ್ದೆಗಳ ನೇಮಕಾತಿಗೆ ಪರಿಗಣಿಸದಿದ್ದರೆ, ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತದೆ. ಆಗ, ಅವುಗಳನ್ನು ಮುನ್ನಡೆಸುವುದು ಕಷ್ಟವಾಗುತ್ತದೆ. ಇದನ್ನೆ ನಂಬಿರುವವರಿಗೆ ಕೆಲಸ ಇಲ್ಲದಂತಾಗುತ್ತದೆ. ಆದ್ದರಿಂದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನೇಮಿಸಲಾಗುವ ‘ಸಿ’ ದರ್ಜೆ ನೌಕರರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರದಿಂದ ಮಾನ್ಯತೆ ಪಡೆದ ನಮ್ಮ ವಾಣಿಜ್ಯ ಸಂಸ್ಥೆಗಳನ್ನು ಹೊರತುಪಡಿಸಿ, ಖಾಸಗಿ ಏಜೆನ್ಸಿಯಿಂದ ಸರ್ಕಾರಿ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ತರಬೇತಿ ಹೊಂದುವುದನ್ನು ಕಡ್ಡಾಯಗೊಳಿಸುತ್ತಿರುವುದು ಯಾವ ನ್ಯಾಯ?’ ಎಂದು ಕೇಳಿದರು.

ಸಂಘದ ಅಧ್ಯಕ್ಷ ಆರ್.ಎಸ್. ಯೋಗೇಶ್, ಉಪಾಧ್ಯಕ್ಷ ಎಸ್.ಎಂ. ರಮೇಶ್, ಉತ್ತರ ಕರ್ನಾಟಕ ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಅನಂತ ಖಾಸನೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.