ADVERTISEMENT

ಬೆಳಗಾವಿ 2ನೇ ರಾಜಧಾನಿಯಾಗಿ ಘೋಷಿಸಲು ಅಶೋಕ ಪೂಜಾರಿ ಆಗ್ರಹ

ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 7:41 IST
Last Updated 5 ಫೆಬ್ರುವರಿ 2021, 7:41 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಅಧಿಕೃತವಾಗಿ ಘೋಷಿಸುವ ಮೂಲಕ, ಗಡಿ ತಗಾದೆ ತೆಗೆಯುವ ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಪೂಜಾರಿ ಇಲ್ಲಿ ಶುಕ್ರವಾರ ಆಗ್ರಹಿಸಿದರು.

‘ಗಡಿ ವಿವಾದ ಜೀವಂತವಿಡಲು ಮಹಾರಾಷ್ಟ್ರದವರು ಬಯಸುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕು ಎನ್ನುವ ಕಾಳಜಿ ನಮ್ಮ ಸರ್ಕಾರಕ್ಕೆ ಇದ್ದರೆ, ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮಹಾಜನ್ ಆಯೋಗದ ವರದಿ ಮಂಡನೆಯಾದಾಗಲೇಬೆಳಗಾವಿ ಗಡಿ ಸಮಸ್ಯೆ ಮುಗಿದಿದೆ. ಹೀಗಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗಡಿ ವಿಷಯದಲ್ಲಿ ಹಲವು ಬಾರಿ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತೇವೆ ಎನ್ನುತ್ತಾರೆ. ಈ ವಿಷಯದಲ್ಲಿ ನಮ್ಮ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಹೇಳಿಕೆಗಳ ಮೂಲಕ ತಿರುಗೇಟು ಕೊಟ್ಟು ಸುಮ್ಮನಾದರೆ ಸಾಲದು. ಗಂಭೀರವಾದ ಹೆಜ್ಜೆ ಇಡಬೇಕು’ ಎಂದರು.

ADVERTISEMENT

‘ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದಿದ್ದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಗಡಿ ವಿಷಯ ಪ್ರಸ್ತಾಪಿಸಬೇಕಿತ್ತು. ಚರ್ಚೆಗೆ ಅವಕಾಶ ಕೊಡಬೇಕಿತ್ತು. ಆದರೆ, ಪ್ರಸ್ತಾಪವೇ ಆಗಲಿಲ್ಲ. ಮಹಾರಾಷ್ಟ್ರದ ನಡೆಯನ್ನು ಅಧಿಕೃತವಾಗಿ ಸರ್ಕಾರದಿಂದ ಖಂಡಿಸಲಿಲ್ಲ. ಹೀಗಾಗಿ, ಸರ್ಕಾರದ ಮನಸ್ಥಿತಿ ಹಾಗೂ ಸಂಕಲ್ಪವನ್ನು ಪ್ರಶ್ನಿಸಬೇಕಿದೆ ಮತ್ತು ಸಂಶಯದಿಂದ ನೋಡಬೇಕಾಗಿದೆ’ ಎಂದು ತಿಳಿಸಿದರು.

‘ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಲ್ಲಿರುವ ಕಾರ್ಯದರ್ಶಿಗಳ ಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು. ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಅಧಿಕೃತ ಮುದ್ರೆ ಒತ್ತಿ ಈ ಭಾಗದ ಜನರ ಹೃದಯವಾದ ಸುವರ್ಣ ವಿಧಾನಸೌಧಕ್ಕೆ ಜೀವ ತುಂಬಬೇಕು. ಆಗ ಮಹಾರಾಷ್ಟ್ರದವರು ಗಡಿ ತಗಾದೆ ನಿಲ್ಲಿಸುತ್ತಾರೆ. ಇದರೊಂದಿಗೆ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದಂತೆಯೂ ಆಗುತ್ತದೆ’ ಎಂದು ತಿಳಿಸಿದರು.

‘ಉತ್ತರದ ಕರ್ನಾಟಕ ಭಾಗದ ಸಚಿವರು ಹಾಗೂ ಶಾಸಕರು ಇಲ್ಲಿನ ಅಭಿವೃದ್ಧಿಗೆ ದನಿ ಎತ್ತುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ನೈತಿಕ ಹೊಣೆಗಾರಿಕೆ ಮರೆತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ, ಜನರ ಆಕ್ರೋಶ ಸ್ಫೋಟಗೊಂಡರೆ ಪ್ರತ್ಯೇಕ ರಾಜ್ಯದ ಕೂಗು ತೀವ್ರಗೊಳ್ಳಬಹುದು. ಅಖಂಡ ಕರ್ನಾಟಕ ಉಳಿಯಬೇಕಾದರೆ, ಉತ್ತರದಲ್ಲೂ ಪ್ರಗತಿ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ಕಲ್ಯಾಣರಾವ ಮುಚಳಂಬಿ, ‘ಮಹಾರಾಷ್ಟ್ರದ ಮುಖ್ಯಮಂತ್ರಿ ಅವಿವೇಕದ ಹೇಳಿಕೆ ನೀಡುವುದು, ಮೊಂಡು ವಾದ ಮಂಡಿಸುವುದು ಹಾಗೂ ಪ್ರಚೋದನೆ ಕೊಡುವುದನ್ನು ನಿಲ್ಲಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.