ADVERTISEMENT

ಬೆಳಗಾವಿ | ವಂದೇ ಭಾರತ್‌: ಸಮಯ ಹೊಂದಾಣಿಕೆಗೆ ಕಸರತ್ತು

ಇನ್ನೂ ಬೆಳಗಾವಿ ತಲುಪದ ಬೆಂಗಳೂರು– ಧಾರವಾಡ ರೈಲು

ಇಮಾಮ್‌ಹುಸೇನ್‌ ಗೂಡುನವರ
Published 18 ಏಪ್ರಿಲ್ 2025, 5:46 IST
Last Updated 18 ಏಪ್ರಿಲ್ 2025, 5:46 IST
ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಸಂಚಾರ ನಡೆಸಿದ್ದ ವಂದೇ ಭಾರತ್‌ ರೈಲು(ಸಂಗ್ರಹ ಚಿತ್ರ)
ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಸಂಚಾರ ನಡೆಸಿದ್ದ ವಂದೇ ಭಾರತ್‌ ರೈಲು(ಸಂಗ್ರಹ ಚಿತ್ರ)   

ಬೆಳಗಾವಿ: ಬೆಂಗಳೂರು– ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇದಕ್ಕಾಗಿ ಸಮಯ ಹೊಂದಾಣಿಕೆ ಮಾಡಲು ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳಿಂದ ಕಸರತ್ತು ನಡೆದಿದೆ.

ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್‌ ರೈಲಿನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. 2023ರ ನವೆಂಬರ್‌ನಲ್ಲಿ ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿಯೂ ಆಗಿತ್ತು. ಆದರೆ, ಸೇವೆ ವಿಸ್ತರಣೆಗೆ ರೈಲ್ವೆ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿದ್ದರು. ಧಾರವಾಡ–ಬೆಳಗಾವಿ ಮಾರ್ಗದಲ್ಲಿ ತಿರುವು ಹೆಚ್ಚಿವೆ ಎಂದು ತಕರಾರು ತೆಗೆದರು.

ಈ ಮಧ್ಯೆ, 2024ರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಪುಣೆಯಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಯವರೆಗೆ ವಂದೇ ಭಾರತ್‌ ರೈಲಿನ ಸೇವೆ ಆರಂಭಿಸಲಾಯಿತು. ಇದರಿಂದ ಆಕ್ರೋಶಗೊಂಡ ಬೆಳಗಾವಿಯವರು ರೈಲ್ವೆ ಇಲಾಖೆ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ADVERTISEMENT

‘ಬೆಂಗಳೂರಿನಿಂದ ಧಾರವಾಡಕ್ಕೆ ಬರುತ್ತಿರುವ ರೈಲಿನ ಸೇವೆಯನ್ನು ಬೆಳಗಾವಿಗೆ ವಿಸ್ತರಿಸಲು ತಾಂತ್ರಿಕ ಕಾರಣ ಕೊಡುತ್ತೀರಿ. ಆದರೆ, ಪುಣೆಯಿಂದ ಬೆಳಗಾವಿ ಮಾರ್ಗವಾಗಿಯೇ ಹುಬ್ಬಳ್ಳಿಗೆ ರೈಲು ಓಡಿಸುತ್ತೀರಿ. ಈ ದ್ವಂದ್ವ ನಿಲುವು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಈ ನಡುವೆ, ‘ಬೇಕಿದ್ದರೆ ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್‌ ರೈಲಿನ ಸೇವೆ ಆರಂಭಿಸಲಿ. ಆದರೆ, ಹುಬ್ಬಳ್ಳಿ–ಧಾರವಾಡ ಜನರಿಗಾಗಿ ಕಲ್ಪಿಸಿದ ಸೇವೆ ಬೆಳಗಾವಿಗೆ ವಿಸ್ತರಿಸುವುದು ಬೇಡ. ಇದರಿಂದ ರಾಜಧಾನಿಗೆ ಓಡಾಡಲು ನಮಗೆ ಅನನುಕೂಲವಾಗುತ್ತದೆ’ ಎಂದು ಹುಬ್ಬಳ್ಳಿ, ಧಾರವಾಡದ ಪ್ರಯಾಣಿಕರು ಆಕ್ಷೇಪ ಎತ್ತಿದ್ದಾರೆ.

ಹಲವರಿಂದ ಪ್ರಯತ್ನ: ಸಂಸದ ಜಗದೀಶ ಶೆಟ್ಟರ್‌, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ ಮತ್ತಿತರರು ಬೆಂಗಳೂರು–ಧಾರವಾಡ ವಂದೇ ಭಾರತ್‌ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ಪ್ರಯತ್ನ ನಡೆಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆದಿವೆ. 

2024ರ ಸೆ.16ರಂದು ಬೆಳಗಾವಿಗೆ ಬಂದಿದ್ದ ಸೋಮಣ್ಣ, ‘ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು–ಧಾರವಾಡ ‘ವಂದೇ ಭಾರತ್’ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ, ಇನ್ನೂ ಅದು ಈಡೇರದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಜಗದೀಶ ಶೆಟ್ಟರ್‌
ಬೆಳಗಿನ ಅವಧಿಯಲ್ಲೇ ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲಿನ ಸೇವೆ ಸಿಕ್ಕರೆ ಬಹಳ ಅನುಕೂಲವಾಗುತ್ತದೆ
ಅಮನ್‌ ನದಾಫ್‌ ಉದ್ಯಮಿ
ಸಮಯ ಹೊಂದಿಸುವುದೇ ಕಷ್ಟ
‘ಬೆಂಗಳೂರು–ಧಾರವಾಡ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ನಾವೂ ಪ್ರಯತ್ನ ನಡೆಸಿದ್ದೇವೆ. ಆದರೆ ಸಮಯ ಹೊಂದಿಸುವುದೇ ಕಷ್ಟವಾಗಿದೆ. ಪ್ರಸ್ತುತ ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಡುತ್ತಿರುವ ರೈಲು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುತ್ತಿದೆ. ಇಲ್ಲಿಂದ 1.15ಕ್ಕೆ ಹೊರಟು ಸಂಜೆ 7.45ಕ್ಕೆ ಬೆಂಗಳೂರು ತಲುಪುತ್ತಿದೆ. ಧಾರವಾಡದಿಂದ ಬೆಳಗಾವಿಗೆ ಇದೇ ರೈಲು ವಿಸ್ತರಣೆಯಾದರೆ ಕನಿಷ್ಠ 5 ತಾಸು(ಎರಡು ಬದಿ ಪ್ರಯಾಣಕ್ಕೆ 4 ತಾಸು ನಿರ್ವಹಣೆಗೆ 1 ತಾಸು) ಹೆಚ್ಚುವರಿ ಬೇಕು. ಮಧ್ಯರಾತ್ರಿ 12ರ ನಂತರ ರೈಲು ಬೆಂಗಳೂರು ತಲುಪಿದರೆ ಅಲ್ಲಿಂದ ತಮ್ಮ ಮನೆಗಳಿಗೆ ಹೋಗಲು ಪ್ರಯಾಣಿಕರಿಗೂ ತೊಂದರೆಯಾಗುತ್ತದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.   
ಶೀಘ್ರವೇ ಸೇವೆ ಆರಂಭ: ಶೆಟ್ಟರ್‌
‘ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ‘ವಂದೇ ಭಾರತ್‌’ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಒಪ್ಪಿಗೆ ಕೊಟ್ಟಿದ್ದಾರೆ. ಪರಿಷ್ಕೃತ ವೇಳಾಪಟ್ಟಿ ಸಿದ್ಧವಾಗುತ್ತಿದ್ದು ಬೆಂಗಳೂರು–ಬೆಳಗಾವಿ ಮಾರ್ಗದ ರೈಲಿನ ಸೇವೆ ಶೀಘ್ರವೇ ಆರಂಭವಾಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ಕಾರ್ಯಾಚರಣೆ ಮಾಡುತ್ತಿರುವ ರೈಲಿನ ವೇಳಾಪಟ್ಟಿ ಗಮನಿಸಿದರೆ ಸಮಯದ ಹೊಂದಾಣಿಕೆ ಕಷ್ಟ. ಹಾಗಾಗಿ ಬೆಳಿಗ್ಗೆ 5ಕ್ಕೆ ಬೆಳಗಾವಿಯಿಂದಲೇ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಅದು ಅಂತಿಮವಾದರೆ ರೈಲು ಮಧ್ಯಾಹ್ನ 12.30ಕ್ಕೆ ಬೆಂಗಳೂರು ತಲುಪಲಿದ್ದು 1.30ಕ್ಕೆ ಅಲ್ಲಿಂದ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ವಾಪಸಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.