ADVERTISEMENT

ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7.5 ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 11:54 IST
Last Updated 22 ಸೆಪ್ಟೆಂಬರ್ 2020, 11:54 IST

ಬೆಳಗಾವಿ: ‘ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಹೆಚ್ಚುವರಿ ಮೀಸಲಾತಿ ನೀಡಬೇಕು’ ಎಂದು ನಾಯಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜಕ್ಕೆ 1978ರಿಂದ ಇಲ್ಲಿಯವರೆಗೆ ಕೇವಲ ಶೇ. 3ರಷ್ಟು ಮೀಸಲಾತಿ ನೀಡುತ್ತಾ ಬರಲಾಗಿದೆ. ಇದರಿಂದಾಗಿ ನಾವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

‘ನಾವು ತೀರಾ ಹಿಂದುಳಿದಿದ್ದೇವೆ. ಇಷ್ಟು ಕಡಿಮೆ ಪ್ರಮಾಣದ ಮೀಸಲಾತಿಯಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಶಿಫಾರಸಿನಂತೆ ನಮಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಸಮುದಾಯದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಕಲಿ ಜಾತಿ ಪ್ರಮಾಣಪತ್ರ ನೀಡುತ್ತಿರುವ ಅಧಿಕಾರಿಗಳು ಮತ್ತು ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಕ.ರಾ.ಪ.ಪಂ. ಸರ್ಕಾರಿ ನೌಕರರ ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷ ರಾಜೇಂದ್ರ ಪಂಗನ್ನವರ, ಉಪಾಧ್ಯಕ್ಷ ಭೀಮಪ್ಪ ಕೋಟ್ಯಾಗೋಳ, ನಿವೃತ್ತ ಉಪನ್ಯಾಸಕ ಡಾ.ಅರ್ಜನ ಪಂಗನ್ನವರ, ರಾಜ್ಯ ಪರಿಷತ್ ಸದಸ್ಯ ಎಂ.ಎಂ. ಕೋಮನ್ನವರ, ಮುಖಂಡರಾದ ಅಜಿತ ನಾಯಕ, ಹನಮಂತ ಶೇಖನವರ, ವಾಲ್ಮೀಕಿ ನಾಯಕ ಸಮಾಜ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೀನೇಶ ಬಾಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.