ರಾಮದುರ್ಗ: ಬೇಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಬೆದರಿಕೆ ಪತ್ರ ಕಳಿಸಿರುವ ಸಮಾಜಘಾತಕರನ್ನು ಪತ್ತೆಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ಇಲ್ಲಿನ ವಿವಿಧ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸ್ಥಳೀಯ ಅಂಜುಮನ್ ಎ ಇಸ್ಲಾಂ ಕಮಿಟಿ, ಸಿಪಿಐ(ಎಂ) ಪಕ್ಷ, ದಲಿತ ಸಂಘರ್ಷ ಸಮಿತಿ, ಅಂಜುಮನ್ ಹೈಸ್ಕೂಲ್ ಕಮಿಟಿ, ಹಡಪದ ಸಮಾಜದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ನಿಜಗುಣಾನಂದ ಸ್ವಾಮೀಜಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಸಾವಿರಾರು ಜನರು ಸಮಾಜ ಸುಧಾರಕರು, ಚಿಂತಕರು, ಸ್ವಾಮೀಜಿಗಳು ಮತ್ತು ಮೌಲ್ವಿಗಳು ಇರುವುದರಿಂದಲೇ ನಮ್ಮ ದೇಶ ಜಾತ್ಯತೀತ ಭಾರತವಾಗಿದೆ. ಆದರೆ ಇಂತಹ ಸಮಾಜ ಸುಧಾರಕರ, ಚಿಂತಕರ ಮೇಲೆ ಹಲ್ಲೆ, ಕೊಲೆ ಬೆದರಿಕೆಗಳು ಬರುತ್ತಿರುವುದು ನಾಚಿಕೆಗೇಡಿನ ವಿಷಯ. ಬಸವಾದಿ ಶರಣರ ತತ್ವಗಳನ್ನು ಹಾಗೂ ಬುದ್ಧ, ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಜನರಿಗೆ ತಿಳಿ ಹೇಳುವ ಶ್ರೀಗಳಿಗೆ ಕೊಲೆ ಬೆದರಿಕೆ ಬಂದಿರುವುದು ನೋವಿನ ಸಂಗತಿ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಜೈನೆಖಾನ್ ಹೇಳಿದರು.
ಕಳೆದ ಎರಡ್ಮೂರು ವರ್ಷಗಳ ಹಿಂದೆ ನಾವು ಸಮಾಜ ಚಿಂತಕರಾದ ಡಾ. ಎಂ.ಎಂ. ಕಲಬುರ್ಗಿ, ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶರನ್ನು ಕಳೆದುಕೊಂಡಿದ್ದೇವೆ. ಇನ್ನೊಬ್ಬ ಸಮಾಜ ಸುಧಾರಕರನ್ನು ಕಳೆದುಕೊಳ್ಳುವುದು ಬೇಡ ಎಂದು ಹೇಳಿದರು.
ಅಂಜುಮನ್ ಎ ಇಸ್ಲಾಂ ಕಮಿಟಿಯ ಉಪಾಧ್ಯಕ್ಷ ಪೈರೋಜ್ ಪಠಾಣ, ಅಂಜುಮನ್ ಹೈಸ್ಕೂಲ್ ಕಮಿಟಿಯ ಅಧ್ಯಕ್ಷ ಮೆಹಾತಬಲಿ ಶಿರಗಾಪೂರ, ಮಹಮ್ಮದಶಫಿ ಬೆಣ್ಣಿ, ದಲಿತ ಸಂಘರ್ಷ ಸಮಿತಿಯ ಮುಖಂಡ ಮಂಜುನಾಥ ತೊರಗಲ್, ಚಿದಾನಂದ ದೊಡಮನಿ ಹಡಪದ ಸಮಾಜದ ಬಸವರಾಜ ನಾವಿ, ಅಶೋಕ ಹಡಪದ ಇನ್ಸಾಫ್ ಕಮಿಟಿಯ ಮೆಹಬೂಬ ಯಾದವಾಡ, ಹಸನಸಾಬ ಜೈನೆಖಾನ್, ಮುರ್ತುಜ್‍ಅಲಿ ಪೆಂಡಾರಿ, ಡಬ್ಬಾ ಅಂಗಡಿ ಸಂಘದ ಫಾರೂಖ್ ಶೇಖ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.