ಬೆಳಗಾವಿ: ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧದ ಮಾತುಕತೆ ಕಾಲಕ್ಕೆ ಕರ್ನಾಟಕ–ಮಹಾರಾಷ್ಟ್ರ ನಡುವಣ ನೀರು ವಿನಿಮಯ ಒಪ್ಪಂದ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
‘ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಬೆಂಗಳೂರಿನಲ್ಲಿ ಜೂನ್ 19ರಂದು ಚರ್ಚೆ ನಡೆಸುತ್ತಿರುವುದು ಸ್ವಾಗತಾರ್ಹ. ಎರಡು ವರ್ಷಗಳ ಪ್ರವಾಹದ ಕಹಿ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಸಂಭವನೀಯ ಪ್ರವಾಹ ತಡೆಗೆ ಕ್ರಮ ವಹಿಸುವುದು ಅತ್ಯವಶ್ಯವಾಗಿದೆ’ ಎಂದು ತಿಳಿಸಿದ್ದಾರೆ.
‘2019ರ ಜನವರಿಯಿಂದ ಜೂನ್‌ವರೆಗೆ ರಾಜ್ಯದ ಕೃಷ್ಣಾ ತೀರದ ನೂರಾರು ನಗರ ಹಾಗೂ ಗ್ರಾಮಗಳ ಜನರು ತೀವ್ರವಾದ ಕುಡಿಯುವ ನೀರಿನ ಅಭಾವ ಎದುರಿಸಬೇಕಾಯಿತು. ಆಗ ಮಹಾರಾಷ್ಟ್ರವು ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲಿಲ್ಲ. ಬಿಡುಗಡೆ ಮಾಡುವ ನೀರಿನ ಪ್ರಮಾಣಕ್ಕೆ ಸಮಾನವಾಗಿ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಪ್ರದೇಶಕ್ಕೆ ನೀರು ಪೂರೈಸಬೇಕೆಂದು ಪಟ್ಟು ಹಿಡಿಯಿತು. ನೀರು ವಿನಿಮಯ ಒಪ್ಪಂದಕ್ಕೆ ಕರ್ನಾಟಕವು ಸಹಿ ಮಾಡದೆ ತನ್ನ ಜಲಾಶಯಗಳಿಂದ ನೀರು ನೀಡುವುದಿಲ್ಲ ಎಂಬ ಹಟಮಾರಿ ಧೋರಣೆ ತಳೆಯಿತು’ ಎಂದು ನೆನಪಿಸಿದ್ದಾರೆ.
‘2019ರ ಜುಲೈನಲ್ಲಿ ಆರಂಭವಾದ ಭಾರಿ ಪ್ರಮಾಣದ ಮಳೆಯಿಂದಾಗಿ ಮಹಾರಾಷ್ಟ್ರದ ಜಲಾಶಯಗಳು ತುಂಬಿದವು. ಕರ್ನಾಟಕಕ್ಕೆ ಮುನ್ಸೂಚನೆ ನೀಡದೆ 5 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಅಲ್ಲಿಂದ ಬಿಡುಗಡೆ ಮಾಡಿದ್ದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳು ಪ್ರವಾಹಪೀಡಿತವಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಯಿತು. 2020ರಲ್ಲಿ ಪ್ರವಾಹ ಬಂದರೂ ಉಭಯ ರಾಜ್ಯಗಳ ನಡುವಿನ ಸಮನ್ವಯದಿಂದಾಗಿ ನಿಯಂತ್ರಣ ಹಾಗೂ ನಿರ್ವಹಣೆ ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.
‘ಕೃಷ್ಣಾ ತೀರದ ಜನರು ಹಾಗೂ ಜಾನುವಾರು ಕುಡಿಯುವ ನೀರಿನ ಅಭಾವ ಎದುರಿಸಿದ ಸಂದರ್ಭದಲ್ಲಿ ಮಹಾರಾಷ್ಟ್ರವು ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬೇಕು. ಅಂತೆಯೇ ಮಹಾರಾಷ್ಟ್ರದ ಜತ್ತ ಪ್ರದೇಶದವರು ಸಮಸ್ಯೆ ಎದುರಿಸಿದಾಗ ಕರ್ನಾಟಕವೂ ಸಾಧ್ಯವಾದಷ್ಟು ಕುಡಿಯುವ ನೀರು ಪೂರೈಸಬಹುದಾಗಿದೆ. ಈ ಸಂಬಂಧ ಮಹಾರಾಷ್ಟ್ರವು ಪ್ರಸ್ತಾಪಿಸಿರುವ ನೀರು ವಿನಿಮಯ ಒಪ್ಪಂದವನ್ನು, ಕರ್ನಾಟಕದ ಹಿತಾಸಕ್ತಿ ಬಲಿ ಕೊಡದೆ ಒಪ್ಪಬಹುದಾಗಿದೆ’ ಎಂದು ತಿಳಿಸಿದ್ದಾರೆ.
‘ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ₹ 3,700 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿರುವ ಸರ್ಕಾರ ಅದಕ್ಕೆ 6 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿದೆ. ಇದರಿಂದ 52ಸಾವಿರ ಹೆಕ್ಟೇರ್ ನೀರಾವರಿಗೆ ಒಳಪಡಲಿದೆ. ಈ 6 ಟಿ.ಎಂ.ಸಿ. ನೀರಿನಲ್ಲಿಯೇ ಜತ್ತ ಪ್ರದೇಶಕ್ಕೆ ನೀರು ಒದಗಿಸಬೇಕೆಂಬ ಮಹಾರಾಷ್ಟ್ರದ ಬೇಡಿಕೆಯು ಅತ್ಯಂತ ಅಸಮಂಜಸವಾಗಿದೆ. ಹೀಗಾಗಿ, ಪರ್ಯಾಯ ಪ್ರಸ್ತಾವವನ್ನು ಕರ್ನಾಟಕವು ಮಹಾರಾಷ್ಟ್ರದ ಮುಂದಿಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.