ADVERTISEMENT

‘ಸುವರ್ಣ ವಿಧಾನಸೌಧವನ್ನು ಶಕ್ತಿ ಕೇಂದ್ರವಾಗಿಸಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 13:50 IST
Last Updated 20 ಡಿಸೆಂಬರ್ 2020, 13:50 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಬೇಕು. ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ರಾಜ್ಯ ಮಟ್ಟದ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಎಚ್ಚರಿಕೆ ನೀಡಿದರು.

‘ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಸುವರ್ಣ ವಿಧಾನಸೌಧದಿಂದಲೇ ಸ್ಪಂದಿಸಬೇಕು. ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿರುವುದರಿಂದ ಜನರಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘15 ದಿನಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಸಂಘಟನೆಗಳ ಮುಖಂಡರ ಸಭೆ ಕರೆಯುತ್ತೇವೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟದ ರೂಪರೇಷೆಗಳನ್ನು ತೀರ್ಮಾನಿಸುತ್ತೇವೆ. ಮಠಾಧೀಶರ ನೇತೃತ್ವದಲ್ಲಿ ಧರಣಿ ನಡೆಸಿದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು, ಮುಖ್ಯಮಂತ್ರಿಯಾದರೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಅವರು ಮಾತಿನಂತೆ ನಡೆದುಕೊಂಡಿಲ್ಲ’ ಎಂದು ದೂರಿದರು.

ADVERTISEMENT

‘ಗೋಕಾಕ ಕ್ಷೇತ್ರದಲ್ಲಿ ದಬ್ಬಾಳಿಕೆ, ಅನ್ಯಾಯ, ಗೂಂಡಾಗಿರಿ ಮುಂದುವರಿದಿದೆ. ಅಂಕಲಗಿಯಲ್ಲಿ ನಡೆದಿರುವ ಗಲಾಟೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಗಲಾಟೆ ನಡೆದ ಸಂದರ್ಭದಲ್ಲಿ ಆರೋಪಿಗಳನ್ನು ಮನೆಗೆ ಕರೆಸಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪೋಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಇಂತಹ ವಿಚಾರಗಳಲ್ಲಿ ಸಂವಿಧಾನಾತ್ಮಕವಾಗಿ ಮಾತನಾಡಬೇಕು’ ಎಂದರು.

ಮುಖಂಡರಾದ ಕಲ್ಯಾಣರಾವ್ ಮುಚಳಂಬಿ, ಪ್ರವೀಣ ಪಾಟೀಲ, ಎಂ.ಪಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.