ADVERTISEMENT

ಕೌಜಲಗಿ: ಬಾರದ ವಿಜ್ಞಾನ ವಿಭಾಗ

ಕಲಿಕೆಗೆ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಮೇ 2022, 12:31 IST
Last Updated 18 ಮೇ 2022, 12:31 IST
ಕೌಜಲಗಿ ಪಟ್ಟಣದಲ್ಲಿರುವ ಪಿಯು ಕಾಲೇಜು ಕಟ್ಟಡ
ಕೌಜಲಗಿ ಪಟ್ಟಣದಲ್ಲಿರುವ ಪಿಯು ಕಾಲೇಜು ಕಟ್ಟಡ   

ಕೌಜಲಗಿ: ಪಟ್ಟಣದಲ್ಲಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು 20 ವರ್ಷಗಳಿಂದ ಕಲಾ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿಜ್ಞಾನ ವಿಭಾಗವಿಲ್ಲದೆ ಈ ಭಾಗದ ವಿದ್ಯಾರ್ಥಿಗಳು ಆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಹೋಬಳಿ ಕೇಂದ್ರವಾದ ಕೌಜಲಗಿ ಮತ್ತು ಸುತ್ತಮುತ್ತಲಿನ ಕುಲಗೋಡ, ಪಿ.ವೈ. ಹುಣಶ್ಯಾಳ, ಢವಳೇಶ್ವರ, ಹೊನಕುಪ್ಪಿ, ಬಿಲಕುಂದಿ, ಗೋಸಬಾಳ, ಕಳ್ಳಿಗುದ್ದಿ ಮಣ್ಣಿಕೇರಿ, ರಡ್ಡೇರಟ್ಟಿ ಮೊದಲಾದ ಕಡೆಗಳ ಬಡ, ಮಧ್ಯಮ ವರ್ಗದ, ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು 2002ರಲ್ಲಿ ಇಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸಲಾಗಿದೆ. ಈ ಸ್ವತಂತ್ರ ಪಿಯು ಕಾಲೇಜು ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಧಾನ ಅಂಗವಾಗಿದೆ. ಆದರೆ, ವಿಜ್ಞಾನ ವಿಭಾಗದ ಆರಂಭಕ್ಕೆ ಮುಹೂರ್ತ ಕೂಡಿಬಂದಿಲ್ಲ.

2-3 ವರ್ಷಗಳ ಹಿಂದೆ ವಿಜ್ಞಾನ ವಿಭಾಗ ಆರಂಭಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತಿದ್ದರೂ ಆರಂಭಿಸಿಲ್ಲ ಎನ್ನಲಾಗುತ್ತಿದೆ.

ADVERTISEMENT

ವಿಜ್ಞಾನ ವಿಭಾಗ ಆರಂಭಿಸಬೇಕು ಎನ್ನುವುದು ಈ ಭಾಗದ ಜನರ ಒತ್ತಾಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಬೇಕು ಎನ್ನುವುದು ಅವರ ಆಗ್ರಹವಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಹಾಗೂ ಸುಲಭವಾಗಿ ವಿಜ್ಞಾನ ಶಿಕ್ಷಣ ಪಡೆಯಬಹುದಾಗಿದೆ ಎನ್ನುತ್ತಾರೆ ಅವರು.

‘ಈ ವರ್ಷವಾದರೂ ವಿಜ್ಞಾನ ವಿಭಾಗ ಆರಂಭಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಕೌಜಲಗಿ ಭಾಗದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ನಿವಾಸಿಗಳಾದ ಇಮಾಮಸಾಬ ಹುನ್ನೂರ ಮತ್ತು ಶ್ರೀಕಾಂತ್ ಪರುಶೆಟ್ಟಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.