ADVERTISEMENT

ನಿಯಮ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2022, 9:44 IST
Last Updated 18 ಮೇ 2022, 9:44 IST

ಬೆಳಗಾವಿ: ‘ಅರಭಾವಿ ಕ್ಷೇತ್ರದಲ್ಲಿ ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ಶಾಸಕರ ಬದಲಿಗೆ, ಅವರ ಆಪ್ತ ಕಾರ್ಯದರ್ಶಿಗಳು ಉದ್ಘಾಟಿಸಿ ಸರ್ಕಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಒತ್ತಾಯಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆರು ಮಂದಿ ಆಪ್ತ ಕಾರ್ಯದರ್ಶಿಗಳನ್ನು ನೇಮಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಅವರೇ ಉದ್ಘಾಟಿಸುತ್ತಿದ್ದಾರೆ. ಆಪ್ತ ಕಾರ್ಯದರ್ಶಿಗಳೆ ಎಲ್ಲ‌ ಕಾರ್ಯಕ್ರಮ ಉದ್ಘಾಟಿಸುವುದಾದರೆ ಶಾಸಕರಾದರೂ ಏಕೆ ಬೇಕು’ ಎಂದು ಪ್ರಶ್ನಿಸಿದರು.

'ಅರಭಾವಿಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಆಪ್ತ ಕಾರ್ಯದರ್ಶಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲು ಸಿದ್ಧರಿದ್ದೇವೆ. ನಮಗೂ ಅವಕಾಶ ನೀಡಬೇಕು’ ಎಂದ ಅವರು, ‘ಆಪ್ತ ಕಾರ್ಯದರ್ಶಿಗಳ ದರ್ಬಾರ್‌ಗೆ ಕಡಿವಾಣ ಹಾಕದಿದ್ದರೆ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸಲಾಗುವುದು. ಪ್ರಧಾನಿಗೆ ದೂರು ನೀಡಲಾಗುವುದು’ ಎಂದರು.

ADVERTISEMENT

ಮುಖಂಡ ರಮೇಶ ಉಟಗಿ, ‘ಶಾಸಕರಿಗೆ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ. ಹೊಸದಾಗಿ ರಚನೆಯಾದ ಮೂಡಲಗಿ ತಾಲ್ಲೂಕಿ‌ನಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಇನ್ನೂ ಆರಂಭಗೊಂಡಿಲ್ಲ. ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಪ್ತ ಕಾರ್ಯದರ್ಶಿಗಳೇ ಆಯ್ಕೆ ಮಾಡುತ್ತಿದ್ದಾರೆ‌. ಇದಕ್ಕೆ ಕಡಿವಾಣ ಹಾಕದಿದ್ದರೆ ಮೂಡಲಗಿ ಪರಿಸ್ಥಿತಿ ಬಿಹಾರಕ್ಕಿಂತಲೂ ಕಡೆಯಾಗಲಿದೆ’ ಎಂದು ದೂರಿದರು.

ಮುಖಂಡರಾದ ಎಂ.ಟಿ. ಪಾಟೀಲ, ಬಿ.ಬಿ. ಹಂದಿಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.