ADVERTISEMENT

ಗಡಿ ವಿವಾದದ ಅರ್ಜಿ ವಜಾಗೊಳಿಸಲು ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 15:13 IST
Last Updated 16 ಜನವರಿ 2021, 15:13 IST

ಬೆಳಗಾವಿ: ‘ದೀರ್ಘ ಕಾಲದಿಂದ ಬಾಕಿ ಇರುವ, ಅನಗತ್ಯ ಕಿರಿಕಿರಿಗೆ ಕಾರಣವಾಗಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವರಿಗೆ ಕರ್ನಾಟಕದ ಬಿಜೆಪಿ ನಾಯಕರೆಲ್ಲ ಸೇರಿ ಮನವರಿಕೆ ಮಾಡಿಕೊಡಬೇಕು’ ಎಂದು ವಕೀಲ ರವೀಂದ್ರ ತೋಟಿಗೇರ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಇಲ್ಲಿಗೆ ಭಾನುವಾರ ಬರುವ ಶಾ ಅವರನ್ನು ಎಲ್ಲ ನಾಯಕರು ಭೇಟಿಯಾಗಿ, ಗಡಿ ವಿವಾದವನ್ನು ಮಹಾರಾಷ್ಟ್ರ ಅನಗತ್ಯವಾಗಿ ಕೆಣಕುತ್ತಿರುವುದರಿಂದ ಮತ್ತು ಸುಪ್ರಿಂ ಕೋರ್ಟ್‌ಗೆ ಹೋಗಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಬೇಕು. ವಿವಾದವನ್ನು ಶಾಶ್ವತವಾಗಿ ಇತ್ಯರ್ಥಗೊಳಿಸಲು ಮುಂದಾಗುವಂತೆ ಮನವೊಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದೇನಿದ್ದರೂ ಸಂಸತ್ತಿನಲ್ಲಿ ಇತ್ಯರ್ಥವಾಗಬೇಕಿರುವ ವಿಷಯ. ಆದ್ದರಿಂದ ಸುಪ್ರೀಂ ಕೋರ್ಟ್‌ನಿಂದ ಮಹಾರಾಷ್ಟ್ರ ಅರ್ಜಿ ಹಿಂಪಡೆದು, ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಒತ್ತಡ ತರಬೇಕು. ರಾಜ್ಯದ ಬಿಜೆಪಿ ನಾಯಕರಿಗೆ ಈ ಕುರಿತು ಉತ್ತಮ ಅವಕಾಶ ಒದಗಿಬಂದಿದೆ. ಕೇಂದ್ರ ಗೃಹ ಇಲಾಖೆ ಮನಸ್ಸು ಮಾಡಿದರೆ ಈ ವಿವಾದ ಇತ್ಯರ್ಥ ದೊಡ್ಡ ವಿಷಯವಲ್ಲ. ಹಾಗಾಗಿ ಬಿಜೆಪಿಯವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋರಿದ್ದಾರೆ.

ADVERTISEMENT

‘ಮಹಾರಾಷ್ಟ್ರ ದಾಖಲಿಸಿರುವ ಪ್ರರಣವನ್ನು ವಜಾಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಪ್ರಕರಣದ ವಿಚಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ರಾಜ್ಯಗಳ ಮಧ್ಯದ ಗಡಿ ವಿವಾದ ಕೇಂದ್ರ ಗೃಹ ಸಚಿವರ ಅಂಗಗಳಲ್ಲಿದೆ. ಸಂಸತ್ತಿನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಈ ಕುರಿತು ಸ್ವತಃ ಕೇಂದ್ರ ಗೃಹ ಸಚಿವರೆ ಪ್ರಸ್ತಾವ ಸಲ್ಲಿಸಬೇಕು. ಆಗ ಮಾತ್ರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.