ಬೆಳಗಾವಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯು ಏಕತೆ ಮತ್ತು ಸಮಾನತೆಯ ಸಂಕೇತವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ತರುವುದೇ ಇದರ ಆಶಯವಾಗಿದೆ’ ಎಂದು ಶಾಸಕ ಆಸಿಫ್ ಸೇಠ್ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ನೀಡಿದೆ. ಪ್ರತಿಯೊಬ್ಬರೂ ತಪ್ಪದೆ ತಮ್ಮ ಹಕ್ಕು ಚಲಾಯಿಸಿ, ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವ ತಮಗೆ ನೀಡಿದ ಹಕ್ಕುಗಳ ಕುರಿತು ಅರಿಯಬೇಕು’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಸ್ತಂಭಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸದೃಢ ರಾಷ್ಟ್ರ ಕಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರದೇಸಾಯಿ, ‘ಜಗತ್ತಿನಲ್ಲಿ ಸುಮಾರು 100 ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿ ಇದ್ದರೂ, ಪ್ರಜಾಪ್ರಭುತ್ವದ ಅನ್ವಯವೇ ಆಡಳಿತ ನಡೆಸುತ್ತಿವೆ. ನಾವು ವಿದೇಶಕ್ಕೆ ಹೋದಾಗ, ನಮ್ಮ ಸಂವಿಧಾನದ ಮಹತ್ವ ಏನು ಎಂಬುದು ಗೊತ್ತಾಗುತ್ತದೆ’ ಎಂದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು.
ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.
ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು. ಹನುಮಂತಪ್ಪ ಪೂಜಾರಿ ಸಂವಿಧಾನದ ಪೀಠಿಕೆ ಬೋಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.