ADVERTISEMENT

ಸೇವೆಯಿಂದ ಜನಮಾನಸದಲ್ಲಿ ಧರ್ಮಸ್ಥಳ ಸಂಘ: ಎಂ.ಎನ್. ಹೆಗ್ಗನ್ನವರ

ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 3:08 IST
Last Updated 16 ಜುಲೈ 2025, 3:08 IST
ಸವದತ್ತಿಯ ಗಂಗಾ-ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ವಿರಕ್ತಮಠದ ಸಿದ್ಧಲಿಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಸವದತ್ತಿಯ ಗಂಗಾ-ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ವಿರಕ್ತಮಠದ ಸಿದ್ಧಲಿಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಸವದತ್ತಿ: ಗ್ರಾಮೀಣ ಪ್ರದೇಶ ಜನರ ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ವ್ಯವಸ್ಥೆ ಸದೃಢಗೊಳಿಸಲು ಸಾಲ ಸೌಲಭ್ಯಗಳು ಮಾತ್ರವಲ್ಲದೇ ಜನಪರ ಸೇವೆಗಳಿಂದ ಧರ್ಮಸ್ಥಳ ಸಂಘ ಜನಮಾನಸದಲ್ಲಿ ಉಳಿದಿದೆ ಎಂದು ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಹೇಳಿದರು.

ಇಲ್ಲಿನ ಗಂಗಾ-ಶಂಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ 1947 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ದಿನದಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿರುವ ಯುವಕರನ್ನು ಸನ್ಮಾರ್ಗದತ್ತ ಕರೆದೊಯ್ಯುವ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಸಾಲ ಸೌಲಭ್ಯದ ಜೊತೆ ಗ್ರಾಮಗಳ ಅಭಿವೃದ್ಧಿಗೆ ಕೆರೆ ಹೂಳೆತ್ತುವ, ಗುಡಿ ಕೈಗಾರಿಕೆಗೆ ಉತ್ತೇಜನ, ಸಮಾಜದ ಸ್ವಾಸ್ಥ್ಯ ಕಾಪಾಡಲು ಮದ್ಯವರ್ಜನ ಶಿಬಿರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆಸುವ ಸಂಘದ ಸೇವೆ ಸ್ಮರಣೀಯ ಎಂದರು.

ADVERTISEMENT

ಗ್ರಾಮೀಣ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯಾಗಿಸಲು ಸ್ವಸಹಾಯ ಸಂಘ ರಚನೆ ಹಾಗೂ ಸ್ವ ಉದ್ಯೋಗ ಮೂಲಕ ಸಬಲೀಕರಣದತ್ತ ಹೆಜ್ಜೆಯನ್ನಿತ್ತಿದೆ. ಗ್ರಾಮೀಣ ಭಾಗದ ಕೆರೆಗಳನ್ನು ಹೂಳೆತ್ತಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಕೌಟುಂಬಿಕ ವ್ಯವಸ್ಥೆಗೆ ಮಾರಕವಾದ ಮದ್ಯ ಸೇವನೆಯ ದುಶ್ಚಟ ಇಂದಿನ ಯುವಕರಲ್ಲಿ ಹೆಚ್ಚಿದೆ. ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇವುಗಳಿಂದ ಮುಕ್ತರನ್ನಾಗಿಸಿ ಉತ್ತಮ ಶಿಕ್ಷಣದ ಸದೃಢ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿ ಗೌರವಯುತವಾಗಿ ಬದುಕಲು ಪ್ರತಿಜ್ಞೆ ಮಾಡಿ ಹೊಸ ಜೀವನ ಆರಂಭಿಸಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಕೃಷಿ ಎಡಿ ಎಸ್.ವಿ. ಪಾಟೀಲ ಮಾತನಾಡಿದರು. ಶಿಬಿರಾರ್ಥಿ ರಮಾನಂದ ಯಡಳ್ಳಿ ಹಾಗೂ ಮಡಿವಾಳಪ್ಪ ತಮ್ಮ ಅನಿಸಿಕೆ ಹಂಚಿಕೊಂಡರು.

ಇನಾಮಹೊಂಗಲ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಪಂಚನಗೌಡ ದ್ಯಾಮನಗೌಡರ, ಶ್ರೀಧರ ಆಸಂಗಿಹಾಳ, ಸಿ.ಬಿ. ನಾವದಗಿ, ಬಸವರಾಜ ಶಿರಸಂಗಿ, ಸವಿತಾ ಹೊಸೂರ, ಎಸ್.ವಿ.ಪಾಟೀಲ, ಪ್ರವೀಣ ಪಟ್ಟಣಶೆಟ್ಟಿ, ಸುಬ್ರಾಯ ನಾಯ್ಕ, ಕೆ.ಎಸ್. ಅಣ್ಣಪ್ಪ, ಕಾವೇರಿ ಮಾಸ್ತಿಹೊಳಿ, ರೇಖಾ ಗೊರಬಾಳ, ಗುರು ನಾಯ್ಕ ಹಾಗೂ ಪ್ರಮುಖರಿದ್ದರು.

‘ಸ್ವ–ಉದ್ಯೋಕ್ಕಾಗಿ ನೆರವು’

ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಮಾತನಾಡಿ ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಸ್ವಂತ ಉದ್ಯೋಗಾಕಾಂಕ್ಷಿಗಳಿಗೆ ಸಾಲ ಸೌಲಭ್ಯ ಒದಗಿಸುತ್ತದೆ ಎಂದರು. ಈಗಾಗಲೇ 900 ಕ್ಕೂ ಅಧಿಕ ಕೆರೆಗಳನ್ನು ಹೂಳೆತ್ತಲಾಗಿದೆ. 400 ನಿರ್ಗತಿಕ ಕುಟುಂಬಕ್ಕೆ ಮಾಸಾಶನ ಸೂರು ನಿರ್ಮಿಸಿಕೊಟ್ಟಿದೆ. ಅರಣ್ಯ ಸಂರಕ್ಷಣೆಯ ಯೋಜನೆಗಳಿದ್ದು ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ. ನಿಮ್ಮ ಈ ಬದಲಾವಣೆ ತಾಯಿ ಹೆಂಡತಿ ಹಾಗೂ ಮಕ್ಕಳಲ್ಲಿ ಕಣ್ಣಲ್ಲಿ ಖುಷಿ ಹೊಮ್ಮಿದೆ. 58 ಶಿಬಿರಾರ್ಥಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.