ADVERTISEMENT

ವಿಕೋಪ ನಿರ್ವಹಣೆ: ಪೂರ್ವಸಿದ್ಧತೆ ಅವಶ್ಯ

ಜಿಲ್ಲಾ ‍ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:42 IST
Last Updated 8 ಫೆಬ್ರುವರಿ 2020, 14:42 IST
ಬೆಳಗಾವಿಯಲ್ಲಿ ಶನಿವಾರ ನಡೆದ ವಿಕೋಪ ನಿರ್ವಹಣೆ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹಾಗೂ ಅತಿಥಿಗಳು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ವಿಕೋಪ ನಿರ್ವಹಣೆ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹಾಗೂ ಅತಿಥಿಗಳು ಉದ್ಘಾಟಿಸಿದರು   

ಬೆಳಗಾವಿ: ‘ವಿಕೋಪವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ಥಳೀಯ ಮಟ್ಟದಲ್ಲಿ ಪೂರ್ವ ಸಿದ್ಧತೆ ಅವಶ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ವಿಶ್ವ ಯುವಕ ಕೇಂದ್ರ, ಯುವ ಹಾಗೂ ಅಭಿವೃದ್ಧಿ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ, ನಿಮ್ಹಾನ್ಸ್‌ ಹಾಗೂ ಬೆಂಗಳೂರಿನ ಫೆವರ್ಡ್‌–ಕೆ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕರ್ನಾಟಕದ ಪ್ರವಾಹಬಾಧಿತ ಜಿಲ್ಲೆಗಳಲ್ಲಿರುವ ಸ್ವಯಂ-ಸೇವಾ ಸಂಸ್ಥೆಗಳಿಗೆ ವಿಕೋಪ ನಿರ್ವಹಣೆ ಮತ್ತು ಪೂರ್ವಸಿದ್ಧತೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಕೋಪದ ಸಂದರ್ಭದಲ್ಲಿ, ಪೂರ್ವ ತಯಾರಿಯ ಕೊರತೆಯಿಂದ ಹೆಚ್ಚಿನ ಹಾನಿ ಅನುಭವಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿಯೊಬ್ಬರೂ ಬೇರೆಯವರ ಮೇಲೆ ಅವಲಂಬಿತರಾಗದೆ ವೈಯಕ್ತಿಕ ಮಟ್ಟದಲ್ಲಿ ಪೂರ್ವಸಿದ್ಧವಾಗಿರಬೇಕು. ಹಾಗೆಯೇ, ಪಂಚಾಯಿತಿಗಳ ಮಟ್ಟದಲ್ಲೂ ತಯಾರಿ ಇರಬೇಕು. ತರಬೇತಿಗಳನ್ನು ನೀಡಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಇದರಿಂದ ವಿಕೋಪಗಳಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ಕುಗ್ಗಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅವಶ್ಯವಿದೆ’ ಎಂದು ತಿಳಿಸಿದರು.

ADVERTISEMENT

ಬೆಂಬಲ ಕೊಡಬೇಕು

ನಿಮ್ಹಾನ್ಸ್ ಕುಲಸಚಿವ ಡಾ.ಕೆ. ಶೇಖರ್‌ ಮಾತನಾಡಿ, ‘ವಿಕೋಪದ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು, ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಅಂಗವಿಕಲರು ಹೆಚ್ಚಾಗಿ ತೊಂದರೆಗೆ ಒಳಗಾಗುತ್ತಾರೆ. ಆಗ ಅವರಿಗೆ ಮನೋಸಾಮಾಜಿಕ ಬೆಂಬಲ ನೀಡುವಿಕೆಯು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆ ಹಾಗೂ ಸಾರ್ವಜನಿಕರು ಅರಿವು ಹೊಂದಿರುವುದು ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ, ಎನ್‌ಎಸ್‌ಎಸ್‌, ಮಹಿಳಾ ಸಬಲೀಕರಣ ಘಟಕ ಹಾಗೂ ಯೂತ್ ರೆಡ್‌ಕ್ರಾಸ್‌ಗಳ ಮೂಲಕ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಅವಶ್ಯವಿದ್ದ ವಿವಿಧ ರೀತಿಯ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿಕೋಪ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿ, ನಿಮ್ಹಾನ್ಸ್ ಸಹಯೋಗದೊಂದಿಗೆ ಸಮಾಜಕಾರ್ಯ ವಿಭಾಗದ ಮೂಲಕ ವಿವಿಧ ಕಾರ್ಯಾಗಾರ ಹಾಗೂ ವಿಸ್ತರಣಾ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ’ ಎಂದು ತಿಳಿಸಿದರು.

ವಿಶ್ವ ಯುವಕ ಕೇಂದ್ರದ ಮಂಜುನಾಥ, ಫೆವರ್ಡ್-ಕೆ ಸಂಸ್ಥೆಯ ಮಹಾಂತೇಶ ಅಗಸಿಮುಂದಿನ, ಸಮಾಜಕಾರ್ಯ ವಿಭಾಗದಿಂದ ಸಂತೋಷ ಪಾಟೀಲ ಉಪಸ್ಥತರಿದ್ದರು.

ಸಮಾಜ ಕಾರ್ಯ ವಿಭಾಗದ ಪ್ರೊ.ಅಶೋಕ ಡಿಸೋಜಾ ಸ್ವಾಗತಿಸಿದರು. ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಡಾ.ಗಾಂಧಿ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವೂದ ನಗಾರ್ಚಿ ನಿರೂಪಿಸಿದರು. ದೇವತಾ ಗಸ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.