ADVERTISEMENT

ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಸ್ಯಾನಿಟೈಸರ್‌ ಉತ್ಪಾದನೆ

ನೀಗಿದ ಕೊರತೆ; ಕೈಗೆಟುಕುವ ದರದಲ್ಲಿ ಲಭ್ಯ

ಶ್ರೀಕಾಂತ ಕಲ್ಲಮ್ಮನವರ
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
   

ಬೆಳಗಾವಿ: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಉಂಟಾಗಿದ್ದ ಸ್ಯಾನಿಟೈಸರ್‌ ಕೊರತೆ ನೀಗಿಸಲು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಮುಂದಾಗಿದ್ದು, ತಮ್ಮಲ್ಲಿರುವ ಮದ್ಯಸಾರವನ್ನು ಬಳಸಿ ಸ್ಯಾನಿಟೈಸರ್‌ ತಯಾರಿಸಲು ಆರಂಭಿಸಿವೆ.

ನಗರದ ಬಹುತೇಕ ಔಷಧಿ ಅಂಗಡಿಗಳಲ್ಲಿ ಇದ್ದಂತಹ ಸ್ಯಾನಿಟೈಸರ್‌ 15 ದಿನಗಳ ಹಿಂದೆಯೇ ಮುಗಿದು ಹೋಗಿತ್ತು. ಅಲ್ಲಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ದೊರಕುತ್ತಿದ್ದ ಸ್ಯಾನಿಟೈಸರ್‌ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಸ್ಯಾನಿಟೈಸರ್‌ ತಯಾರಿಸಲು ಅನುಮತಿ ನೀಡಿತ್ತು.

ಇದರ ಪರಿಣಾಮವಾಗಿ, ಜಿಲ್ಲೆಯ 5 ಕಾರ್ಖಾನೆಗಳು ಸ್ಯಾನಿಟೈಸರ್‌ ತಯಾರಿಸಲು ಆರಂಭಿಸಿವೆ. ಅಥಣಿಯ ಉಗಾರ ಶುಗರ್ಸ್‌, ಸವದತ್ತಿ ತಾಲ್ಲೂಕಿನ ಮುನವಳ್ಳಿಯ ರೇಣುಕಾ ಶುಗರ್ಸ್‌, ಗೋಕಾಕ ತಾಲ್ಲೂಕಿನ ಪಿ.ಜಿ ಹುಣಶ್ಯಾಳದ ಸತೀಶ ಶುಗರ್ಸ್‌, ಚಿಕ್ಕೋಡಿಯ ದೂಧ್‌ಗಂಗಾ ಶುಗರ್ಸ್‌ ಹಾಗೂ ಬೇಡಕಿಹಾಳದ ವೆಂಕಟೇಶ್ವರ ಪವರ್‌ ಪ್ರಾಜೆಕ್ಟ್‌ ಸಕ್ಕರೆ ಕಾರ್ಖಾನೆ ಸ್ಯಾನಿಟೈಸರ್‌ ನಿರ್ಮಾಣದಲ್ಲಿ ತೊಡಗಿವೆ.

ADVERTISEMENT

ಇವುಗಳ ಪೈಕಿ ಅಥಣಿಯ ಉಗಾರ ಶುಗರ್ಸ್‌ ಕಾರ್ಖಾನೆಗೆ ಮಾತ್ರ ಸಾರ್ವಜನಿಕರಿಗೆ ಹಾಗೂ ಔಷಧಿ ಅಂಗಡಿಗಳಿಗೆ ಪೂರೈಕೆ ಮಾಡಲು ಅನುಮತಿ ನೀಡಲಾಗಿದೆ. ಇನ್ನುಳಿದ ನಾಲ್ಕು ಕಾರ್ಖಾನೆಗಳು ರಾಜ್ಯ ಸರ್ಕಾರಕ್ಕೆ ಹಾಗೂ ಪಕ್ಕದ ಧಾರವಾಡ, ಹಾವೇರಿ, ಯಾದಗಿರಿ ಜಿಲ್ಲಾಡಳಿತಕ್ಕೆ ಪೂರೈಸುತ್ತಿವೆ.

ಅಧಿಕಾರಿಗಳಿಗೆ ಉಚಿತ ವಿತರಣೆ:

‘ಜಿಲ್ಲೆಯ 5 ಸಕ್ಕರೆ ಕಾರ್ಖಾನೆಗಳು ಸ್ಯಾನಿಟೈಸರ್‌ ತಯಾರಿಸಲು ಆರಂಭಿಸಿವೆ. ಕೊರೊನಾ ಸೋಂಕು ತಡೆಗಟ್ಟಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ಪೊಲೀಸ್‌ ಸಿಬ್ಬಂದಿಗಳಿಗೆ, ತಹಶೀಲ್ದಾರ್‌, ಪಿಡಿಒ ಸೇರಿದಂತೆ ಅವಶ್ಯಕ ಸೇವೆ ಒದಗಿಸುತ್ತಿರುವ ಅಧಿಕಾರಿಗಳಿಗೆ ಬೇಕಾಗುವಷ್ಟು ದ್ರಾವಣವನ್ನು ಪೂರೈಕೆ ಮಾಡುತ್ತಿದ್ದೇವೆ. ಯಾವುದೇ ರೀತಿಯ ಕೊರತೆ ಇಲ್ಲ’ ಎಂದು ಅಬಕಾರಿ ಇಲಾಖೆಯ ಉಪ–ಆಯುಕ್ತ ಬಸವರಾಜ ಸಂದಿಗವಾಡ ಹೇಳಿದರು.

ದ್ರಾವಣವನ್ನು ತಯಾರಿಸಲು ತಗಲುವ ವೆಚ್ಚವನ್ನಷ್ಟೇ ದರವಾಗಿ ಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ. ಇದರ ಪರಿಣಾಮವಾಗಿ ಅಗ್ಗದ ದರದಲ್ಲಿ ಲಭ್ಯವಾಗುತ್ತಿದೆ. ಸ್ಯಾನಿಟೈಸರ್‌ ಬೇಕಾದವರು ನೇರವಾಗಿ ಉಗಾರ ಶುಗರ್ಸ್‌ ಕಾರ್ಖಾನೆಯ ಸೇಲ್ಸ್‌ ಮ್ಯಾನೇಜರ್‌ ರಾಜೇಂದ್ರ ಬೆಳಂಕಿ (ಮೊಬೈಲ್‌ 9900559141) ಅವರನ್ನು ಸಂಪರ್ಕಿಸಬಹುದು.

ದರ:

ಸಾರ್ವಜನಿಕರಿಗೆ 90 ಎಂ.ಎಲ್‌ಗೆ ₹ 30 ಇದೆ. ಆಸ್ಪತ್ರೆಗಳಿಗೆ 5 ಲೀಟರ್‌ ಕ್ಯಾನ್‌ಗೆ ₹ 1,000 ದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.