ಬೈಲಹೊಂಗಲದಲ್ಲಿ ಜನರು ಬಾಳೆಕಂದುಗಳನ್ನು ಖರೀದಿಸಿದರು
ಬೈಲಹೊಂಗಲ: ಇದೀಗ ತಾನೆ ಚನ್ನಮ್ಮನ ವಿಜಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಬೈಲಹೊಂಗಲ ಜನರಿಗೆ ಮತ್ತೊಂದು ಸಡಗರ ಬಂದಿದೆ. ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲೆಡೆ ಈಗ ದೀಪಾವಳಿಯ ಸಂಭ್ರಮ ಮನೆಮಾಡಿದೆ.
ತೋರಣ, ಕಬ್ಬು, ಕಾರ್ತಿಕ ಬುಟ್ಟಿ, ಹೊಸ ಬಟ್ಟೆ ಖರೀದಿ ಜೋರಾಗಿದೆ. ದೀಪಾವಳಿಯ ಹಬ್ಬದ ಉಡುಗೊರೆಯಾಗಿ ಕಳೆದ ಒಂದು ತಿಂಗಳ ಹಿಂದೆ ಸುರಿದ ದೊಡ್ಡ ಮಳೆಯಿಂದ ರೈತರು, ವ್ಯಾಪಾರಸ್ಥರು ಖುಷಿಯಾಗಿದ್ದಾರೆ.
ದೀಪಾವಳಿ ಸಂಭ್ರಮ ಮನೆಮನೆಗಳಲ್ಲಿ ತುಪ್ಪದ ಘಮಲು ಬೀರುವಂತೆ ಮಾಡಿದೆ. ಭರ್ಜರಿ ಹೋಳಿಗೆ, ವಡೆ, ರಸಪೂರಿ ಭೋಜನ ಸಿದ್ಧವಾಗಿದ್ದು ಬಾಯಲ್ಲಿ ನೀರು ತರಿಸಿದೆ. ಲಕ್ಷ್ಮಿ ದೇವಿಯ ಪೂಜೆಯ ಘಂಟಾನಾದ ಹೊರಹೊಮ್ಮಿದ್ದು, ಎಲ್ಲರ ಬಾಳಲ್ಲಿ ಆರ್ಥಿಕ ಅಭ್ಯುದಯದ ಜತೆಗೆ ಸುಖಸಂತಸ, ಆರೋಗ್ಯಭಾಗ್ಯ ಎಲ್ಲರದಾಗಲೆಂದು ಭಕ್ತಿಭಾವದ ಪ್ರಾರ್ಥನೆ ನಡೆದಿದೆ.
ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಬಟ್ಟೆ ಖರೀದಿಯೂ ಭರದಿಂದ ನಡೆದಿದೆ. ಉಚಿತ ಬಸ್ ಪ್ರಯಾಣದಿಂದ ಸ್ಥಳೀಯ ವ್ಯಾಪಾರಕ್ಕೆ ಸ್ವಲ್ಪ ಅಡಚಣೆ ಆಗಿದೆ. ಸಣ್ಣ ಬಟ್ಟೆ ಮತ್ತು ವಸ್ತು ಖರೀದಿಗೂ ಜನ ಬೆಳಗಾವಿ, ಹುಬ್ಬಳ್ಳಿ, ರಬಕವಿ, ಕೊಣ್ಣೂರಗೆ ಹೊರಟಿದ್ದಾರೆ.
ಕೃಷಿಮೇಳ ಮತ್ತು ಕುಸ್ತಿ: ಮರಡಿಬಸವೇಶ್ವರ ಜಾತ್ರೆ ಅಂಗವಾಗಿ ಈ ವರ್ಷ ಕೃಷಿಮೇಳ, ಜಾನುವಾರು ಜಾತ್ರೆ ನಡೆಯುತ್ತಿದೆ. ಶಾಸಕ ಮಹಾಂತೇಶ ಕೌಜಲಗಿ ಮಾರ್ಗದರ್ಶನದಲ್ಲಿ ಚಿತ್ರನಟ ಶಿವರಂಜನ್ ಬೋಳಣ್ಣವರ, ಮಡಿವಾಳಪ್ಪ ಹೋಟಿ ಹಾಗೂ ನಾಡಿನ ಅನೇಕ ರೈತರು, ಮುಖಂಡರು ಸೇರಿ ಪಕ್ಷಾತೀತವಾಗಿ ಕೃಷಿಮೇಳ ಏರ್ಪಡಿಸಿದ್ದು, ಜಾತ್ರೆ ಕಳೆ ಹೆಚ್ಚಿಸಲಿದೆ. ಕುಸ್ತಿಪ್ರೇಮಿ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ ಅವರು ದೇಶಮಟ್ಟದ ಕುಸ್ತಿ ಜೋಡಿಗಳ ಸಂಯೋಜನೆ ನಡೆಸಿದ್ದಾರೆ. ಡಾ. ವಿಶ್ವನಾಥ ಪಾಟೀಲ ಮಾರ್ಗದರ್ಶನದಲ್ಲಿ ಕ್ರೀಡಾ ಮತ್ತು ಕಲಾ ವೇದಿಕೆಯಿಂದಲೂ ಕುಸ್ತಿಗಳ ಸಂಯೋಜನೆ ನಡೆಯುತ್ತಾ ಬಂದಿದೆ. ಇವೆಲ್ಲ ದೀಪಾವಳಿಯ ಕಳೆಗೆ ಪೂರಕವಾಗಿ ನಿಂತಿದೆ.
ಪಾಂಡವರು ಬಂದರು ಮನೆಗೆ
ಪ್ರತಿ ಮನೆಯಲ್ಲಿ ಆಕಳ ಸಗಣಿಯಿಂದ ನಿರ್ಮಿಸಿದ ಪಾಂಡವರ, ಸೈನಿಕರ ಮೂರ್ತಿಗಳನ್ನು ಮಾಡುವುದು, ಸುಣ್ಣದಿಂದ ಹೆಜ್ಜೆ ಗುರುತುಗಳನ್ನು ಹಾಕಿ ಬೆಳಿಗ್ಗೆ ಪೂಜೆ ಸಲ್ಲಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ.
ವಿಜಯಶಾಲಿಯಾಗಿ ಬಂದ ಪಾಂಡವರು ಮನೆಯಲ್ಲಿ ನೆಲೆಸಲಿ, ಅವರ ಧರ್ಮಗುಣಗಳೇ ಮನೆಯ ಮಕ್ಕಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಮನೆತುಂಬ ಪಾಂಡವರ ಹೆಜ್ಜೆಗಳನ್ನು ಮೂಡಿಸುವ ರೂಢಿ ಇದೆ.
ರೈತ ಕುಟುಂಬಗಳಲ್ಲಿ ಜಾನುವಾರುಗಳ ಕೊಟ್ಟಿಗೆಗೆ ಪೂಜ್ಯನೀಯ ಸ್ಥಾನ ಇದೆ. ದನದ ಕೊಟ್ಟಿಗೆಯಲ್ಲಿ ಲಕುಮಿಯ ಗೂಡು ಇರುವುದು ಕಡ್ಡಾಯ. ಗೋವುಗಳ ಜೊತೆಗೆ ಲಕುಮಿ ವಾಸವಾಗಿರುತ್ತಾಳೆ ಎನ್ನುವ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.