ADVERTISEMENT

ಬೆಳಗಾವಿ | ಸಡಗರದ ದೀಪಾವಳಿ ಆಚರಣೆಗೆ ಚಾಲನೆ

ಮನೆಗಳು, ವ್ಯಾಪಾರಿಗಳು, ಕಚೇರಿಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸಿ ಸಂಭ್ರಮಿಸಿದ ಜನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 1:51 IST
Last Updated 21 ಅಕ್ಟೋಬರ್ 2025, 1:51 IST
ಬೆಳಗಾವಿಯ ಕಾಕತಿವೇಸ್‌ನಲ್ಲಿ ಸೋಮವಾರ ಕಬ್ಬಿನ ಮಾರಾಟ ಜೋರಾಗಿತ್ತು   ಪ್ರಜಾವಾಣಿ ಚಿತ್ರ
ಬೆಳಗಾವಿಯ ಕಾಕತಿವೇಸ್‌ನಲ್ಲಿ ಸೋಮವಾರ ಕಬ್ಬಿನ ಮಾರಾಟ ಜೋರಾಗಿತ್ತು   ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನ ಆಚರಿಸಲಾಗುವ ‘ದೀಪಾವಳಿ’ ಹಬ್ಬದ ಆಚರಣೆಗೆ ಸೋಮವಾರ ಸಡಗರದ ಚಾಲನೆ ದೊರೆಯಿತು. 

ನಗರದ ವಿವಿಧ ಬಡಾವಣೆಗಳಲ್ಲಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಮುಂಜಾವಿನಲ್ಲೇ ತಮ್ಮ ಮನೆಯಂಗಳದಲ್ಲಿ ಆಕರ್ಷಕ ರಂಗೋಲಿ ಬಿಡಿಸಿದ್ದರು.

ನಂತರ ನರಕ ಚತುರ್ದಶಿ ಪ್ರಯುಕ್ತ ತಮ್ಮ ಮನೆಗಳು, ವ್ಯಾಪಾರಿ ಮಳಿಗೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಜನರು ಲಕ್ಷ್ಮಿಪೂಜೆ ನೆರವೇರಿಸಿದರು. ವಿವಿಧ ಧಾರ್ಮಿಕ ಆಚರಣೆ ಕೈಗೊಂಡ ನಂತರ ಸಿಹಿ ಹಂಚಿ, ‍ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಸಂಜೆ ಕುಟುಂಬದವರೆಲ್ಲ ಸೇರಿಕೊಂಡು, ಹಣತೆಗಳನ್ನು ಬೆಳಗಿ, ಪಟಾಕಿ ಮತ್ತು  ಸಿಡಿಮದ್ದುಗಳನ್ನು ಸಿಡಿಸಿ ಖುಷಿಪಟ್ಟರು.

ನಗರದ ವಿವಿಧ ದೇವಾಲಯಗಳು ತಳಿರು–ತೋರಣಗಳಿಂದ ಸಿಂಗಾರಗೊಂಡಿದ್ದವು. ದಿನವಿಡೀ ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ವಿಶೇಷ ಪೂಜೆ, ಅಲಂಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. 

ಖರೀದಿ ಭರಾಟೆ: ಕಾಕತಿವೇಸ್‌, ಖಡೇಬಜಾರ್‌, ಗಣಪತ ಗಲ್ಲಿ, ಮಾರುತಿ ಗಲ್ಲಿ, ಪಾಂಗುಳ ಗಲ್ಲಿ, ಬುರುಡ ಗಲ್ಲಿ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರದ ಜನದಟ್ಟಣೆ ಕಂಡುಬಂತು. ವೈವಿಧ್ಯಮಯ ವಿನ್ಯಾಸಗಳ ಹಣತೆಗಳು, ಸಿದ್ಧಪಡಿಸಿದ ಉಡುಪುಗಳು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಅದರಲ್ಲೂ ಆಕಾಶಬುಟ್ಟಿಗಳ ಖರೀದಿ ಜೋರಾಗಿತ್ತು. ಕಬ್ಬು, ಹೂವು, ಹಣ್ಣು, ಬಾಳೆ ಎಲೆಗಳನ್ನು ಹೆಚ್ಚಾಗಿ ಜನರು ಖರೀದಿಸಿದರು.

ನಗರದ ವಿವಿಧ ಸ್ವೀಟ್‌ಮಾರ್ಟ್‌ಗಳಲ್ಲಿ ಸಿಹಿ ಖಾದ್ಯಗಳು ಮತ್ತು ಒಣಹಣ್ಣುಗಳ ಮಾರಾಟದ ಖರೀದಿಯೂ ಭರದಿಂದ ಸಾಗಿತ್ತು.

ದೀಪಾವಳಿ ಪ್ರಯುಕ್ತ ಬೆಳಗಾವಿಯ ಕಾಕತಿವೇಸ್‌ನಲ್ಲಿ ಜನರು ಚೆಂಡು ಹೂವು ಖರೀದಿಸಿದರು
ಬೆಳಗಾವಿಯ ಅಶೋಕ ನಗರದ ಪುಷ್ಪ ಹರಾಜು ಕೇಂದ್ರದಲ್ಲಿ ಸೋಮವಾರ ಜನದಟ್ಟಣೆ ಹೆಚ್ಚಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.