ADVERTISEMENT

‘ವೈದ್ಯರಿಗೆ ಅತ್ಯುತ್ತಮ ಮನ್ನಣೆ ಅಗತ್ಯ’

ಲೋಕಮಾನ್ಯ ಸಹಕಾರ ಸೊಸೈಟಿಯಿಂದ ವೈದ್ಯರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 13:30 IST
Last Updated 2 ಜುಲೈ 2019, 13:30 IST
ಬೆಳಗಾವಿಯ ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ಡಾ.ಎಸ್.ಸಿ. ಧಾರವಾಡ ಸತ್ಕರಿಸಿದರು
ಬೆಳಗಾವಿಯ ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ಡಾ.ಎಸ್.ಸಿ. ಧಾರವಾಡ ಸತ್ಕರಿಸಿದರು   

ಬೆಳಗಾವಿ: ‘ವೈದ್ಯರು ಸಮಾಜದ ರಕ್ಷಕರಿದ್ದಂತೆ. ಹಗಲಿರುಳು ದುಡಿದು ರೋಗಿಗಳ ಸೇವೆಯಲ್ಲಿಯೇ ತಮ್ಮ ಆಯುಷ್ಯ ಕಳೆಯುತ್ತಾರೆ. ಹೀಗಾಗಿ, ಅವರಿಗೆ ಸಾಮಾಜಿಕವಾಗಿ ಅತ್ಯುನ್ನತ ಮನ್ನಣೆ ನೀಡುವ ಅವಶ್ಯವಿದೆ’ ಎಂದು ಯುಎಸ್ಎಂ–ಕೆಎಲ್‌ಇ ನಿಯೋಜಿತ ನಿರ್ದೇಶಕ ಡಾ.ಅಶೋಕ ಪಾಂಗಿ ಹೇಳಿದರು.

ಇಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ವೈದ್ಯರು ಮತ್ತು ಸಮಾಜ ಬೇರೆ ಬೇರೆಯಲ್ಲ. ವೈದ್ಯ ವೃತ್ತಿಯು ಸಮಾಜದ ಅವಿಭಾಜ್ಯ ಅಂಗವಾಗಿದೆ ಹಾಗೂ ಪ್ರಮುಖವಾಗಿ ಬೇಕಾದುದಾಗಿದೆ. ಹೀಗಾಗಿ, ಅವರನ್ನು ನಮ್ಮವರಂತೆ ಕಾಣಬೇಕು’ ಎಂದರು.

ADVERTISEMENT

ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿ ಸಂಯೋಜಕ ವಿನಾಯಕ ಜಾಧವ ಮಾತನಾಡಿ, ‘ವೈದ್ಯರು ಸ್ವ ಹಿತಾಸಕ್ತಿ, ಕೌಟುಂಬಿಕ ಜೀವನ ಕಡೆಗಣಿಸಿ ಹಗಲಿರುಳೆನ್ನದೇ ರೋಗಿಗಳ ಸೇವೆ ಮಾಡುತ್ತಾರೆ. ಅವರ ವೃತ್ತಿಯನ್ನು ಎಲ್ಲರೂ ಗೌರವದಿಂದ ಕಾಣಬೇಕು. ಸಂಕಷ್ಟಗಳ ಸಂದರ್ಭದಲ್ಲಿ ನೆರವಾಗುವ ಅವರನ್ನು ಸ್ಮರಿಸಬೇಕು’ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ ಮಾತನಾಡಿ, ‘ವೈದ್ಯರ ಸಹಕಾರದಿಂದಾಗಿ ವ್ಯಕ್ತಿಯು ರೋಗಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೇ ಆರೋಗ್ಯಕರ ಜೀವನ ಪದ್ಧತಿಯನ್ನು ಅರಿಯಬಹುದು. ಹೀಗಾಗಿ, ಅವರು ಜೀವ ರಕ್ಷಕರಷ್ಟೇ ಅಲ್ಲದೇ ಜೀವನ ಶಿಕ್ಷಣದಾತರೂ ಆಗಿದ್ದಾರೆ. ಕಾಲಕಾಲಕ್ಕೆ ಅವರ ಸಲಹೆ ಪ‍ಡೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಎಲ್ಲರೂ ಆರೋಗ್ಯವಾಗಿದ್ದರೆ ಸಮಾಜದಲ್ಲಿ ಅಭಿವೃದ್ಧಿಯು ತ್ವರಿತಗತಿಯಲ್ಲಿ ಆಗುತ್ತದೆ. ಹೀಗಾಗಿ, ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿದರು.

25 ವೈದ್ಯರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಸಂತೋಷ ಮಮದಾಪುರ, ಮುಖಂಡ ಸಂಜಯ ಸವ್ವಾಶೇರಿ, ಹಿರಿಯ ವೈದ್ಯ ಡಾ.ಬಿ.ಬಿ. ಪುಟ್ಟಿ ಹಾಗೂ ಡಾ.ಪಿ.ಎಸ್. ಅರಳಿಕಟ್ಟಿ ಮಾತನಾಡಿದರು.

ಸಂತೋಷ ಇತಾಪೆ ನಿರೂಪಿಸಿದರು. ಅರುಣ ನಾಗಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.