ADVERTISEMENT

ಚಿಕ್ಕೋಡಿ: ಮಹಿಳೆಯರ ಶೌಚಾಲಯ ನಿರ್ಮಿಸಲು‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:40 IST
Last Updated 26 ಜುಲೈ 2025, 2:40 IST
<div class="paragraphs"><p>ಚಿಕ್ಕೋಡಿ ಪಟ್ಟಣದ ಐಎಂಎ ಸಭಾಭವನದಲ್ಲಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಎಸ್ಸಿ ಎಸ್ಟಿ ವರ್ಗದ ಜನರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು</p></div>

ಚಿಕ್ಕೋಡಿ ಪಟ್ಟಣದ ಐಎಂಎ ಸಭಾಭವನದಲ್ಲಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಎಸ್ಸಿ ಎಸ್ಟಿ ವರ್ಗದ ಜನರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು

   

ಚಿಕ್ಕೋಡಿ: ತಾಲ್ಲೂಕಿನ ಡೋಣವಾಡ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ್ದರಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ಜಾಗ ಗುರುತಿಸಿ, ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌  ಚಿದಂಬರ ಕುಲಕರ್ಣಿ ಭರವಸೆ ನೀಡಿದರು.

ಪಟ್ಟಣದ ಐಎಂಎ ಸಭಾಭವನದಲ್ಲಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ತಾಲ್ಲೂಕು ಎಸ್ಸಿ ಎಸ್ಟಿ ವರ್ಗದ ಜನರ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆಯಲ್ಲಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ಮಾಡಲಾಯಿತು.

ADVERTISEMENT

ಶೌಚಾಲಯ ತೊಂದರೆಯ ಬಗ್ಗೆ ಭಾರತಿ ಸೋಲಾಪೂರೆ ಸಭೆಯ ಗಮನಕ್ಕೆ ತಂದರು. ಅದಕ್ಕೆ ಉತ್ತರಿಸಿದ ತಹಶೀಲ್ದಾರರು, ಕ್ರಮದ ಭರವಸೆ ನೀಡಿದರು.

ಮುಖಂಡ ಅಶೋಕ ಭಂಡಾರಕರ ಅವರು ವಿದ್ಯುತ್ ಬಿಲ್ ವಸೂಲಿಯ ನೆಪದಲ್ಲಿ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಇದಕ್ಕೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಕಸಾರೆ ಉತ್ತರಿಸಿ ಇಂತಹ ಆವಾಂತರಗಳು ಆಗದಂತೆ ಸಿಬ್ಬಂದಿಗೆ ಸೂಚಿಸಲಾಗುವುದು ಎಂದರು.

ಕಬ್ಬೂರು ಪಟ್ಟಣದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಸ್ಮಶಾನ ನಿರ್ಮಾಣಕ್ಕಾಗಿ ₹ 34 ಲಕ್ಷ ಮಂಜೂರಾಗಿದ್ದು, ಟೆಂಡರ್ ಕರೆದರೂ ಇನ್ನು ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದು ನಾಮದೇವ ಹಿರೇಕೋಡಿ ಹೇಳಿದರು.

ದಲಿತ ಮುಖಂಡ ಸುದರ್ಶನ ತಮ್ಮಣ್ಣವರ ಅವರು ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂದು ದೂರಿದರು.

ಹೊಸದಾಗಿ ವಕೀಲ ವೃತ್ತಿ ಪ್ರಾರಂಭಿಸುವ ಎಸ್ಸಿ ಎಸ್ಟಿ ಸಮುದಾಯದವರಿಗೆ ಕಚೇರಿಯ ಪೀಠೋಪಕರಣ ಹಾಗೂ ಪುಸ್ತಕ ಖರೀದಿಗೆ ಪುರಸಭೆ ವ್ಯಾಪ್ತಿಯಲ್ಲಿ ₹50 ಸಾವಿರ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ₹1 ಲಕ್ಷ ಸಹಾಯ ಧನ ನೀಡಬೇಕೆಂಬ ನಿಯಮ ಇದ್ದರೂ ಅಧಿಕಾರಿಗಳು ಅನುಷ್ಠಾನಕ್ಕೆ ತರಲು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ವಕೀಲ ಮೋಹನ ಮೋಟನ್ನವರ ಸಭೆಯ ಗಮನಕ್ಕೆ ತಂದರು.

ನಾಗರಮುನ್ನೋಳಿ ಗ್ರಾಮದ ಅಂಬೇಡ್ಕರ್ ನಗರಕ್ಕೆ ಮಂಜೂರಾದ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆಗೆ ತೆರೆದಿದ್ದರಿಂದ ದಲಿತ ಸಮುದಾಯದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಮಂಜೂರಾತಿಯಾಗಿರುವ ಸ್ಥಳಕ್ಕೆ ಅಂಗನವಾಡಿ ಕೇಂದ್ರ ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.

ಶಿರಗಾಂವ ಗ್ರಾಮದಲ್ಲಿ ಎಸ್ಸಿ ಸಮುದಾಯವರಿಗೆ ನಿರ್ಮಿಸಿದ ಸ್ಮಶಾನಭೂಮಿ ಕಾಮಗಾರಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಭ್ರಷ್ಟಾಚಾರ ನಡೆದಿದ್ದು ಈ ಕುರಿತು ತನಿಖೆ ಕೈಗೊಳ್ಳಬೇಕೆಂದು ವಿನಂತಿಸಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜು ಜಾಧವ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರ್ಚನಾ ಸಾನೆ, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡು, ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದರು.

ಸಭೆಯಲ್ಲಿ ಚಿಕ್ಕೋಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ವಣ್ಣೂರ, ಚಿಕ್ಕೋಡಿ ಪಿ.ಎಸ್‍.ಐ. ಬಸಗೌಡ ನೇರ್ಲಿ, ಸದಲಗಾ ಪಿ.ಎಸ್‍.ಐ ಶಿವನಗೌಡ ಬಿರಾದಾರ, ಅಂಕಲಿ ಪಿ.ಎಸ್‍.ಐ ನಂದೀಶ, ರಾಜು ಗಸ್ತಿ, ರಾವಸಾಹೇಬ ಫಕೀರೆ, ನಿರಂಜನ ಕಾಂಬಳೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರ್ಚನಾ ಸಾನೆ, ಬಿ.ಇ.ಒ ಪ್ರಭಾವತಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.