ADVERTISEMENT

ರೆಮ್‌ಡಿಸಿವಿರ್‌ ಅನಗತ್ಯ ಬಳಕೆ ಸರಿಯಲ್ಲ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

​ಪ್ರಜಾವಾಣಿ ವಾರ್ತೆ
Published 11 ಮೇ 2021, 14:13 IST
Last Updated 11 ಮೇ 2021, 14:13 IST

ಬೆಳಗಾವಿ: ‘ರೆಮ್‌ಡಿಸಿವಿರ್‌ ಚುಚ್ಚುಮದ್ದು ಪ್ರಾಯೋಗಿಕ ಮತ್ತು ತನಿಖಾ ಹಂತದಲ್ಲಿರುವ ಔಷಧವಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ದೃಢೀಕರಣಯುಕ್ತ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

‘ಅದು ಕೋವಿಡ್-19 ಸೋಂಕಿಗೆ ಜೀವರಕ್ಷಕ ಔಷಧವಲ್ಲ. ಅದರಿಂದ ಮರಣ ಪ್ರಮಾಣ ಕಡಿಮೆಯಾಗಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಅದನ್ನು ಆಸ್ಪತ್ರೆಗಳಲ್ಲಿ ವೈದ್ಯರ ನಿಗಾದಲ್ಲಿದ್ದಾಗ ಮಾತ್ರ ಪಡೆಯಬೇಕು. ಸಾಧಾರಣ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆಮ್ಲಜನಕ ಪಡೆಯುತ್ತಿರುವವರಿಗೆ ಇದನ್ನು ವೈದ್ಯರ ಸಲಹೆ ಮೇರೆಗೆ ನೀಡಲಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಮನೆಗಳಲ್ಲಿ ಸ್ವಇಚ್ಛೆಯಿಂದ ಪಡೆಯಬಾರದು’ ಎಂದು ಸೂಚಿಸಿದ್ದಾರೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಒಳರೋಗಿಗಳಿಗೆ ಸರ್ಕಾರದಿಂದ ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಆಸ್ಪತ್ರೆಗೆ ಒದಗಿಸಲಾಗುತ್ತಿದೆ. ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ದಾಖಲಿಸಲಾದ ಕೋವಿಡ್-19 ಒಳರೋಗಿಗಳಿಗೆ ಕೂಡ ಆ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆ ಚುಚ್ಚುಮದ್ದು ಬೇಕಾದಲ್ಲಿ ಆಸ್ಪತ್ರೆಯ ಆಡಳಿತವು ಕೆಪಿಎಂಇ ಪೋರ್ಟಲ್ (http://kpme.karnataka.gov.in) ಮೂಲಕ ಬೇಡಿಕೆ ಸಲ್ಲಿಸಬೇಕು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಕುಂದು ಕೊರತೆಗಳಿದ್ದಲ್ಲಿ ಕೋವಿಡ್ ವಾರ್‌ ರೂಂ ಸಹಾಯವಾಣಿ 0831–2436960 ಸಂಪರ್ಕಿಸಿಬಹುದು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.