ADVERTISEMENT

ಬೆಳಗಾವಿ | ಜೋಡಿ ಕೊಲೆ ಪ್ರಕರಣ: ಮಹಿಳೆ ಸೇರಿ ಐವರ ಬಂಧನ

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 9:39 IST
Last Updated 2 ಅಕ್ಟೋಬರ್ 2020, 9:39 IST
ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ನಗರ ಪೊಲೀಸರು, ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ
ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ನಗರ ಪೊಲೀಸರು, ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ   

ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ನಗರ ಪೊಲೀಸರು, ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಕಾಳ್ಯಾನಟ್ಟಿಯ ಕಲ್ಪನಾ ಮಹೇಶ ಬಸರಿಮರದ (35), ಕೊಲ್ಹಾಪುರ ಜಿಲ್ಲೆ ನಂದಗಡ ತಾಲ್ಲೂಕಿನ ಸುರತೆಯ ಮಹೇಶ ಅಲಿಯಾಸ್ ಮಲ್ಲಪ್ಪ ಮೋನಪ್ಪ ನಾಯಕ (20), ಬೆಳಗುಂದಿಯ ರಾಹುಲ್ ಮಾರುತಿ ಪಾಟೀಲ, ಗಣೇಶಪುರ ದುರ್ಗಾಮಾತಾ ಕಾಲೊನಿಯ 4ನೇ ಕ್ರಾಸ್‌ನ ರೋಹಿತ ನಾಗಪ್ಪ ವಡ್ಡರ (21) ಹಾಗೂ ಚವಾಟ ಗಲ್ಲಿಯ ನಿವಾಸಿ ಶಾನೂರ ನಾಗಪ್ಪ ಬನ್ನಾರ (18) ಬಂಧಿತರು.

ಬರ್ಬರವಾಗಿ ಕೊಲೆ:

ADVERTISEMENT

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ ವಿಕ್ರಮ್ ಅಮಟೆ ಪ್ರಕರಣ ವಿವರ ನೀಡಿದರು.

‘5 ತಿಂಗಳ ಗರ್ಭಿಣಿಯಾಗಿದ್ದ ರೋಹಿಣಿ ಹುಲಮನಿ (23) ಹಾಗೂ ರಾಜಶ್ರೀ ಬನ್ನಾರ (18) ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸೆ.26ರಂದು ಸಂಜೆ 4ರ ಸುಮಾರಿಗೆ ಕೊಲೆಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 3 ತನಿಖಾ ತಂಡಗಳನ್ನು ರಚಿಸಲಾಗಿತ್ತು. ಕೆಲವೇ ದಿನಗಳಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಹುಲ್ ಹಾಗೂ ರೋಹಿತ್‌ ದ್ವಿಚಕ್ರವಾಹನದಲ್ಲಿ ಬಂದು ಕಣ್ಣಿಗೆ ಖಾರದ ಪುಡಿ ಎರಚಿ, ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಐವರೂ ಸೇರಿ ರೂಪಿಸಿದ್ದ ಸಂಚಿನಂತೆ ಕೃತ್ಯ ನಡೆದಿದೆ. ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.

ತನ್ನಿಂದ ದೂರವಾಗಿದ್ದಕ್ಕೆ:

‘ಮೃತ ರೋಹಿಣಿಯ ಪತಿ ಗಂಗಪ್ಪ ಅಲಿಯಾಸ್ ಪ್ರಶಾಂತ ಹುಲಮನಿ ಹಾಗೂ ಕಲ್ಪನಾ ಬಸರಿಮರದ ನಡುವೆ ಹಲವು ವರ್ಷಗಳಿಂದ ಪರಿಚಯವಿತ್ತು. ಕಲ್ಪನಾ ಗಂಗಪ್ಪಗೆ ಆಗಾಗ ಹಣ ನೀಡುತ್ತಿದ್ದಳು. ರೋಹಿಣಿಯನ್ನು ಮದುವೆ ಆದಾಗಿನಿಂದ ಗಂಗ‍ಪ್ಪ ತನ್ನಿಂದ ದೂರವಾಗಿದ್ದಕ್ಕೆ ಮತ್ತು ಪಡೆದ ಹಣ ವಾಪಸ್‌ ಕೊಡದಿದ್ದಕ್ಕೆ ಸಿಟ್ಟಾಗಿ, ಸಂಬಂಧಿಕ ಮಹೇಶ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಕೃತ್ಯಕ್ಕೆ ಬೇಕಾಗುವ ಖರ್ಚು ನೋಡಿಕೊಂಡಿದ್ದಳು. ಆತ ತನ್ನ ಗೆಳೆಯರಾದ ರಾಹುಲ ಹಾಗೂ ಮಾರುತಿ ಮೂಲಕ ಕೊಲೆ ಮಾಡಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿರುವ ಕೃತ್ಯವಿದು’ ಎಂದು ವಿವರಿಸಿದರು.

‘ರಾಜಶ್ರೀ ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ, ರೋಹಿಣಿ ಜೊತೆಗಿದ್ದ ಕಾರಣದಿಂದ ಕೊಂದಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಈವರೆಗಿನ ಮಾಹಿತಿಯಂತೆ, ಆರೋಪಿಗಳು ಈ ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ’ ಎಂದರು.

‘ಪ್ರಕರಣ ಬೇಧಿಸಿದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್‌ ನಂದೀಶ್ವರ, ಪಿಎಸ್‌ಐ ಆನಂದ ಆದಗೊಂಡ, ಸಿಬ್ಬಂದಿ ಬಿ.ಎ. ಚೌಗಲಾ, ಬಿ.ಎಚ್. ಬಿಚಗತ್ತಿ, ದೀಪಕ ಮಾಳವದೆ, ವೈ.ವೈ. ತಳೇವಾಡ, ಎಂ.ಎಸ್. ಗಾಡವಿ, ಸಿ.ಎಂ. ಹುಣಶ್ಯಾಳ, ಎನ್.ಎಂ. ಚಿಪ್ಪಲಕಟ್ಟಿ, ಬಿ.ವೈ. ಪೂಜಾರ, ಎಸ್.ಎಂ. ಲೋಕುರೆ, ಸಿ.ಎಸ್. ಬಂಗಾರಿ ಒಳಗೊಂಡ ತಂಡವನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.