ADVERTISEMENT

ಬೆಳಗಾವಿ | ಕೇಂದ್ರ ತಂಡದಿಂದ ಬರ ಅಧ್ಯಯನ ಆರಂಭ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 4:20 IST
Last Updated 6 ಅಕ್ಟೋಬರ್ 2023, 4:20 IST
   

ಬೆಳಗಾವಿ: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದೆ.

ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ಸಭೆ ನಡೆಸಿದ ತಂಡ, ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಮಾಹಿತಿ ಕಲೆಹಾಕಿತು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, 'ಜಿಲ್ಲೆಯ 15 ತಾಲ್ಲೂಕುಗಳಲ್ಲಿ ಬಿತ್ತನೆ ಸಂದರ್ಭ ಮೂರು ವಾರಕ್ಕಿಂತ ಹೆಚ್ಚು ಮಳೆಯಾಗಿರಲಿಲ್ಲ. ಹಾಗಾಗಿ ಬರ‌ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ, ಖಾನಾಪುರ ಹೊರತುಪಡಿಸಿ, 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ' ಎಂದು ತಿಳಿಸಿದರು.

ADVERTISEMENT

ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ರಾಜ್ಯ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ ಮಾತನಾಡಿದರು.

ಜಿಲ್ಲೆಯ ಬರ ಪರಿಸ್ಥಿತಿ ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡ ವೀಕ್ಷಿಸಿತು.

ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯಾ, ನೀತಿ ಆಯೋಗದ ಸಂಶೋಧನಾ ಅಧಿಕಾರಿ ಶಿವಚರಣ ಮೀನಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಇದ್ದರು.

ಇಲ್ಲಿಂದ ಬೈಲಹೊಂಗಲ, ಸವದತ್ತಿ, ಯರಗಟ್ಟಿ, ರಾಮದುರ್ಗ ತಾಲ್ಲೂಕುಗಳಿಗೆ ತಂಡದ ಸದಸ್ಯರು ತೆರಳಿ ಬರ ಪರಿಸ್ಥಿತಿ ಅವಲೋಕಿಸಲಿದ್ದಾರೆ. ನಂತರ ವಿಜಯಪುರ ಜಿಲ್ಲೆಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.