ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ಇಲ್ಲಿನ ಶಿವಬಸವ ನಗರದ ಲೋಕೋಪಯೋಗಿ ಇಲಾಖೆ ಕ್ವಾರ್ಟರ್ಸ್ ಬಳಿ ಮಂಗಳವಾರ ಮಾದಕವಸ್ತು ಮಾರುತ್ತಿದ್ದ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿ ನಗರದ ಕಾರ್ತಿಕ ಸಿದ್ದಪ್ಪ ಮಲ್ಲಾಡದ(25) ಬಂಧಿತ. ಆತನಿಂದ ₹30 ಸಾವಿರ ಮೌಲ್ಯದ 16.14 ಗ್ರಾಂ ಹೆರಾಯಿನ್, ₹520 ನಗದು ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸಿದ್ದಪ್ಪನಿಗೆ ಹೆರಾಯಿನ್ ಸರಬರಾಜು ಮಾಡಿದ್ದ ಮುಂಬೈನ ಕೋಳಿವಾಡದ ಅಮ್ಮ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅಲಾರವಾಡ ಸೇತುವೆ ಬಳಿ ಮಂಗಳವಾರ ಗಾಂಜಾ ಮಾರುತ್ತಿದ್ದ ಖಾನಾಪುರ ತಾಲ್ಲೂಕಿನ ಹಿರೇಹಟ್ಟಿಹೊಳಿಯ ಮಲ್ಲಿಕಸಾಬ್ ಮಕ್ಬುಲ್‌ಸಾಬ್ ಸನದಿ(26) ಎಂಬಾತನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆತನಿಂದ ₹22 ಸಾವಿರ ಮೌಲ್ಯದ 1.07 ಕೆ.ಜಿ ಗಾಂಜಾ, ₹800 ನಗದು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ಗಾಂಜಾ ಸರಬುರಾಜು ಮಾಡಿದ್ದ ಹಿರೇಹಟ್ಟಿಹೊಳಿಯ ನೌಶಾದ್ ಸನದಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
****
30 ವರ್ಷ ಕಠಿಣ ಶಿಕ್ಷೆ
ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 30 ವರ್ಷ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಖಾನಾಪುರ ತಾಲ್ಲೂಕಿನ ಕಕ್ಕೇರಿಯ ಕೃಷ್ಣಾ ಗಣಪತಿ ವಡ್ಡರ ಶಿಕ್ಷೆಗೆ ಒಳಗಾದವ. 2019ರ ಜೂನ್ 20ರಂದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಮಹಾರಾಷ್ಟ್ರದ ಮಿರಜ್‌ಗೆ ಅಪಹರಿಸಿಕೊಂಡು ಹೋಗಿ, ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದ.
ಈ ಸಂಬಂಧ ಬಾಲಕಿ ಪೋಷಕರು ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಎಂ.ಆರ್.ಪವಾರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆ ₹4 ಲಕ್ಷ ಪರಿಹಾರ ಪಡೆಯುವಂತೆ ಮತ್ತು ಆ ಹಣವನ್ನು ರಾಷ್ಟ್ರಿಕೃತ ಬ್ಯಾಂಕ್‌ನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇರಿಸುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.