ಬೆಳಗಾವಿ: ‘ಮಾದಕ ವಸ್ತುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಅವುಗಳ ಮಾರಾಟ ಮಾಡುವವರನ್ನು ಹಾಗೂ ಮಾದಕ ವ್ಯಸನಿಗಳನ್ನು ಗುರುತಿಸಿ ತಡೆಗಟ್ಟುವುದು ಎಲ್ಲರ ಜವಾಬ್ದಾರಿ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಸಂದೀಪ ಪಾಟೀಲ ಹೇಳಿದರು.
ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಶನಿವಾರ, ಇಲ್ಲಿನ ಸುವರ್ಣ ಸೌಧದಲ್ಲಿ ನಡೆದ ‘ಪರಿವರ್ತನೆ’ ಮಾದಕ ಮುಕ್ತ ಕರ್ನಾಟಕ ಅಭಿಯಾನ ಹಾಗೂ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಜನತೆ ವಿವಿಧ ಬಗೆಯ ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ದುಶ್ಚಟಗಳಿಂದ ತಮ್ಮ ಜೀವನದ ಜೊತೆಗೆ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತಿರುವುದು ಖೇದಕರ. ಮಾದಕ ವ್ಯಸನದ ಅಮಲಿನಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಸಮಾಜದ ಸ್ವಾಸ್ಥ್ಯವು ಹಾಳಾಗುತ್ತಿದೆ’ ಎಂದರು.
ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಬರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಬಕಾರಿ ಉಪ ಆಯುಕ್ತೆ ಎಂ.ವನಜಾಕ್ಷೀ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಬೆಳಗಾವಿ ಉತ್ತರ ವಲಯದ ಅಬಕಾರಿ ಇಲಾಖೆ ಉಪ ಆಯುಕ್ತೆ ಆರ್.ಎಸ್.ಸ್ವಪ್ನಾ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಮಾದಕ ವಸ್ತು ಮುಕ್ತ ಅಭಿಯಾನ ಹಾಗೂ ಸ್ವಚ್ಛತಾ ಹೀ ಸೇವಾ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ, ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಯಿತು.
ಪ್ರಪಂಚದಾದ್ಯಂತ 190 ದಶಲಕ್ಷಕ್ಕೂ ಹೆಚ್ಚು ಮಾದಕ ವ್ಯಸನಿಗಳಿದ್ದಾರೆ. ಇದರಲ್ಲಿ ಅತಿ ಹೆಚ್ಚು ಯುವ ಜನಾಂಗ ಇರುವುದು ಆತಂಕಕಾರಿಎಂ.ವನಜಾಕ್ಷೀ ಅಬಕಾರಿ ಉಪ ಆಯುಕ್ತೆ
ನಮ್ಮ ಸುತ್ತ ಮಾದಕ ವಸ್ತುಗಳ ಕುರಿತು ಚಟುವಟಿಕೆಗಳನ್ನು ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ಜಾಲತಾಣ ಅಥವಾ ಸಹಾಯವಾಣಿ ಸಂಖ್ಯೆ ಮೂಲಕ ತಿಳಿಸಬೇಕುಬೋರಸೆ ಭೂಷಣ ಗುಬರಾವ್ ನಗರ ಪೊಲೀಸ್ ಆಯುಕ್ತ
ಮಾದಕ ವಸ್ತುಗಳ ಸೇವನೆ ಯುವ ಪೀಳಿಗೆಗೆ ಗರ್ವದ ಸಂಕೇತವಾಗಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡದೆ ಹೋದರೆ ಯುವ ಪೀಳಿಗೆ ನಾಶವಾಗಿ ಹೋಗುತ್ತದೆರಾಹುಲ್ ಶಿಂಧೆ ಸಿಇಒ ಜಿ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.