ಬೆಳಗಾವಿ: ‘ಜಿಲ್ಲಾಧಿಕಾರಿ ಕಚೇರಿಯಲ್ಲಿ ‘ಕಾಗದ ರಹಿತ(ಪೇಪರ್ ಲೆಸ್)’ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
‘ಅಗತ್ಯವಿರುವ ಡಿ.ಎಸ್. ಕಾರ್ಡ್, ಲ್ಯಾನ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ಎಲ್ಲ ಶಾಖೆಗಳ ಸಿಬ್ಬಂದಿಗೆ ಅಗತ್ಯ ತರಬೇತಿ ಕೂಡ ನೀಡಲಾಗಿದೆ. ಕಾಗದರಹಿತ ಕಚೇರಿಯ ಆಶಯದಂತೆ ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿಯ ಕಡತಗಳು ಮತ್ತು ಪತ್ರಗಳನ್ನು ಕಡ್ಡಾಯವಾಗಿ ಇದೇ ವ್ಯವಸ್ಥೆಯಲ್ಲಿ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ’ ಎಂದಿದ್ದಾರೆ.
‘ಎಲ್ಲ ಶಾಖೆಗಳ ಶಿರಸ್ತೇದಾರರು ಮತ್ತು ವಿಷಯ ನಿರ್ವಾಹಕರು ಕಾಗದರಹಿತ ಕಚೇರಿ ವ್ಯವಸ್ಥೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಎಲ್ಲ ಶಾಖೆಗಳ ಮುಖ್ಯಸ್ಥರು ತಮ್ಮ ಅಧೀನ ಸಿಬ್ಬಂದಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ತಾಂತ್ರಿಕ ಸಲಹೆ-ನೆರವು ಅಗತ್ಯವಿದ್ದಲ್ಲಿ ಸಿಬ್ಬಂದಿಗೆ ನೆರವು ಒದಗಿಸಲು ತಾಂತ್ರಿಕ ಸಮಾಲೋಚಕರನ್ನು ಕೂಡ ನೇಮಿಸಲಾಗಿದೆ. ಅಗತ್ಯವಿದ್ದರೆ ಅವರ ನೆರವು ಪಡೆದುಕೊಳ್ಳಬಹುದು. ಇ- ಆಫೀಸ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸದ ಸಿಬ್ಬಂದಿ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.