ADVERTISEMENT

ಉಪ ಚುನಾವಣೆ | ನೀತಿಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 11:52 IST
Last Updated 22 ಸೆಪ್ಟೆಂಬರ್ 2019, 11:52 IST

ಬೆಳಗಾವಿ: ‘ಅಧಿಕಾರಿಗಳು ಮಾದರಿ ನೀತಿಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ಭಾನುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯಾವುದೇ ರೀತಿಯ ಹೊಸ ಕಾಮಗಾರಿಗಳನ್ನು ಆರಂಭಿಸಬಾರದು. ಹೊಸ ಟೆಂಡರ್ ಪ್ರಕ್ರಿಯೆ ನಡೆಸಬಾರದು. ಒಂದು ವೇಳೆ ಈಗಾಗಲೇ ಕಾಮಗಾರಿ ಆರಂಭಿಸಿದ್ದರೆ ಕೆಲಸ ಮುಂದುವರಿಸಬಹುದು. ಸಚಿವರು ಅಥವಾ ಜನಪ್ರತಿನಿಧಿಗಳ ಅನಗತ್ಯ ಭೇಟಿ ಸೇರಿದಂತೆ ಮಾದರಿ ನೀತಿಸಂಹಿತೆ ಉಲ್ಲಂಘಿಸುವ ರೀತಿಯಲ್ಲಿ ಯಾವುದೇ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬಾರದು’ ಎಂದು ಸೂಚಿಸಿದರು.

ADVERTISEMENT

ರಜೆ ಕೊಡಬೇಡಿ:

‘ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಅಧಿಕಾರಿಗಳು ಅಥವಾ ಕೆಳಹಂತದ ಸಿಬ್ಬಂದಿಗೆ ರಜೆ ಕೊಡಬಾರದು. ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ಹೊರಗಡೆ ತೆರಳಬಾರದು’ ಎಂದು ನಿರ್ದೇಶನ ನೀಡಿದರು.

‘ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದೆ. ಏಕಗವಾಕ್ಷಿ ಪದ್ಧತಿಯಲ್ಲಿ ಸಂಘಟಕರಿಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ನಗರ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಪಾಲಿಕೆ ಆಯುಕ್ತರು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಅನುಮತಿ ನೀಡಲಿದ್ದಾರೆ. ಪರವಾನಗಿ ಹೊಂದಿರುವ ಆಯುಧಗಳನ್ನು ಕೂಡಲೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ನಿಯಮಾವಳಿ ಅನ್ವಯ ಜಮಾ ಮಾಡಬೇಕು’ ಎಂದು ಸೂಚಿಸಿದರು.

ಚುನಾವಣಾ ಕರ್ತವ್ಯ ಕಡ್ಡಾಯ:

‘ಚುನಾವಣೆಗೆ ನಿಯೋಜಿಸಲಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ನೀಡಲಾಗುವ ಕೆಲಸವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಪ್ರಜಾಪ್ರಾತಿನಿಧ್ಯ ಕಾಯ್ದೆ ಪ್ರಕಾರ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಅಂಗವಿಕಲರು, ಗರ್ಭಿಣಿಯರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಕಳೆದ ಬಾರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದ ಶಾಲಾ ಕಟ್ಟಡಗಳನ್ನು ಕೂಡಲೇ ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಯಾವುದಾದರೂ ಕಟ್ಟಡ ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿಗೊಳಿಸಬೇಕು. ಸಂಪೂರ್ಣ ಕುಸಿದಿದ್ದರೆ ಪರ್ಯಾಯ ಮತಗಟ್ಟೆಗಳನ್ನು ಗುರುತಿಸಲಾಗುವುದು. ಲೋಕೋಪಯೋಗಿ, ಅರಣ್ಯ ಸೇರಿಂದತೆ ಎಲ್ಲ ಇಲಾಖೆಯ ಪ್ರವಾಸಿಮಂದಿರ ಹಾಗೂ ನಿರೀಕ್ಷಣಾ ಮಂದಿರಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗುವುದು’ ಎಂದರು.

ಡಿಸಿಪಿ ಸೀಮಾ ಲಾಟ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.